ಉದಯವಾಹಿನಿ, ಮೈಸೂರು: ಅಯೊಧ್ಯೆ ರಾಮ ಮಂದಿರದ ಬಾಲರಾಮನ ಮೂರ್ತಿ ಕೆತ್ತನೆಗೆ ಬಳಸಿದ್ದು ಕರ್ನಾಟಕದ ಕೃಷ್ಣಶಿಲೆಯ ಕಲ್ಲು. ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಘೋಷಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ದೇಶದ ಜನರು ಎದುರು ನೋಡುತ್ತಿದ್ದ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ರಾಮಲಲ್ಲಾ ಮಿಗ್ರಹದ ಶಿಲೆ ಸಿಕ್ಕಿದ್ದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿಯ ರಾಮದಾಸ್ ಎಂಬುವವರ ಜಮೀನಿನಲ್ಲಿ. ಅವರ ಜಮೀನಿನಲ್ಲಿ ಕೃಷ್ಣಶಿಲೆ ಸಿಕ್ಕಿರುವುದು ನಿಜಕ್ಕೂ ಸಂತೋಷ. ಈ ಕೃಷ್ಣಶಿಲೆಯನ್ನು ಹುಡುಕಿದವರು ಮೈಸೂರಿನವರೇ ಆದ ಶ್ರೀನಿವಾಸ್. ಕೃಷ್ಣಶಿಲೆಯಲ್ಲಿ ಬಾಲರಾಮನ ವಿಗ್ರಹ ಕೆತ್ತಿದ್ದು ಮೈಸೂರಿನವರೇ ಎಂದು ಹೇಳಿದರು.
ಮೋದಿಯವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಇದೇ ಚಾಮುಂಡೇಶ್ವರಿ ಕ್ಷೇತ್ರದ ಜಾಗದಲ್ಲಿ ರಾಮನ ಮೂರ್ತಿಗೆ ಶಿಲೆ ಸಿಕ್ಕಿದೆ. ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಮಾಡುತ್ತೇವೆ. ಜನವರಿ 22ರಂದು ಭೂಮಿ ಪೂಜೆ ನಡೆಯಲಿದೆ. ದೇಣಿಗೆ ಸಂಗ್ರಹಿಸಿ ಮಂದಿರ ನಿರ್ಮಿಸುತ್ತೇವೆ. ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದಲೇ ದೇಗುಲಕ್ಕೆ ಮೂರ್ತಿ ಕೆತ್ತನೆ ಮಾಡಿಸಲಾಗುತ್ತದೆ ಎಂದರು. ಶ್ರೀರಾಮ, ಸೀತಾ, ಲಕ್ಷ್ಮಣ, ಭರತ, ಶತೃಘ್ನ ಸ್ವಪರಿವಾರ ಸಮೇತವಾದ ದೇಗುಲ ಇದಾಗಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!