ಉದಯವಾಹಿನಿ, ಹುಬ್ಬಳ್ಳಿ: ‘ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನವಾಗಿದ್ದಾನೆ. ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ಸಮೃದ್ಧ, ಸದೃಢ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶ್ರೀರಾಮನವಮಿ ಉತ್ಸವ ಸಮಿತಿಯಿಂದ ಹುಬ್ಬಳ್ಳಿಯ ಬಾನಿ ಓಣಿಯ ಶಕ್ತಿ ರಸ್ತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 200 ವರ್ಷಗಳ ಕಾಲ ನಮ್ಮನ್ನು ಆಳಿದ್ದ ಇಂಗ್ಲೆಂಡ್ ಅನ್ನು ಸಹ ಹಿಂದಿಕ್ಕಿದೆ’ ಎಂದರು.
ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಇಡೀ ದೇಶ ರಾಮಮಯವಾಗಿದ್ದು, ರಾಮನಾಮ ಅನುರಣಿಸಿದೆ. ದೇಶದ ಜನರ ಮನಸ್ಸಲ್ಲಿ ರಾಮ ನೆಲೆಯೂರಿದ್ದಾನೆ’ ಎಂದರು.
‘ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜನರು ತಮ್ಮ ಮನೆಯ ಹಬ್ಬದಂತೆ ಸಂಭ್ರಮಿಸಿದ್ದಾರೆ. ಶತಮಾನಗಳ ಕಾಯುವಿಕೆಗೆ ಮುಕ್ತಿ ಸಿಕ್ಕಿದೆ. ಶ್ರೀರಾಮ ದೇಶದಲ್ಲಿ ಅವತರಿಸಿದ್ದು ನಮ್ಮೆಲ್ಲರ ಹೆಮ್ಮೆ. ರಾಮನಾಮ ಜಪದಿಂದ ಅಧ್ಯಾತ್ಮ ಶಕ್ತಿ ಹೆಚ್ಚಲಿದೆ. ಪ್ರತಿನಿತ್ಯ ರಾಮನಾಮ ಸ್ಮರಣೆ ಆಗಬೇಕು’ ಎಂದು ಹೇಳಿದರು.
