ಉದಯವಾಹಿನಿ, ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‍ರವರಿಗೆ ಕಾಂಗ್ರೆಸ್‍ನಲ್ಲಿ ಯಾವುದೇ ಅನ್ಯಾಯವಾಗಿರಲಿಲ್ಲ, ಗೌರವ ಯುತವಾಗಿ ನಡೆಸಿಕೊಳ್ಳಲಾಗಿತ್ತು. ಆದರೂ ಅವರು ಮರಳಿ ಬಿಜೆಪಿಗೆ ಹೋಗಿದ್ದೇಕೆ ಎಂದು ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗರು ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‍ಗೆ ಬಂದಿದ್ದರು. ಪಕ್ಷ ಅವರಿಗೆ ಟಿಕೆಟ್ ನೀಡಿತ್ತು. ಸೋಲು ಕಂಡ ಬಳಿಕವೂ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದೆವು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಯಾಗಿದ್ದ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದೆವು. ನಮ್ಮಲ್ಲಿ ಅವರಿಗೆ ಯಾವುದೇ ಅನ್ಯಾಯವಾಗಲೀ, ಅಪಮಾನವಾಗಲೀ ಆಗಿಲ್ಲ. ಬಿಜೆಪಿ ನನಗೆ ಅಪಮಾನ ಮಾಡಿದೆ. ಮತ್ತೆ ಆ ಪಕ್ಷಕ್ಕೆ ವಾಪಸ್ ಹೋಗುವುದಿಲ್ಲ ಎಂದು ತಮ್ಮ ಜೊತೆ ಜಗದೀಶ್ ಶೆಟ್ಟರ್ ಹೇಳಿದ್ದರು. ಅನಂತರ ಯಾವ ಬೆಳವಣಿಗೆಗಳಾಗಿವೆ ಎಂದು ನನಗೆ ಗೊತ್ತಿಲ್ಲ ಎಂದರು.
