ಉದಯವಾಹಿನಿ, ಬೀದರ್: ‘ಪ್ರಜಾಪ್ರಭುತ್ವ ಉಳಿಸಿಕೊಂಡು ಹೋಗಬೇಕಾದರೆ ಅರ್ಹ ಮತದಾರರೆಲ್ಲರೂ ಮತದಾನ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದರು.ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಕೆಲವು ದೇಶಗಳಲ್ಲಿ ಇನ್ನೂ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. 2011ರಲ್ಲಿ ದಕ್ಷಿಣ ಸುಡಾನ್ ಹೊಸ ದೇಶವಾಗಿ ಉದಯವಾದಾಗ ಅಲ್ಲಿನ ಶಾಂತಿ ಪಾಲನಾ ಪಡೆಯಲ್ಲಿ ನಾನು ಕೆಲಸ ಮಾಡಿದ್ದೆ. ಆ ದೇಶದಲ್ಲಿ ಸರ್ಕಾರಿ ಶಾಲೆಗಳಿಲ್ಲ. ಇತ್ತೀಚೆಗೆ ಒಂದೆರೆಡು ಕಡೆ ಆರಂಭಗೊಂಡಿವೆ. ಅಲ್ಲಿನ ಮಕ್ಕಳು ಬೀದಿ ಬದಿ ದೀಪದಲ್ಲಿ ಕುಳಿತು ಓದುವ ಪರಿಸ್ಥಿತಿ ಇದೆ. ಭಾರತ ದೇಶವಾಸಿಗಳು ನಾವು ಬಹಳ ಸುದೈವಿಗಳು ಎಂದರು. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಶೇಕಡಾ ನೂರಕ್ಕೆ ನೂರರಷ್ಟು ಹಕ್ಕು ಚಲಾಯಿಸಬೇಕು. ಪ್ರತಿ ಚುನಾವಣೆಯಲ್ಲಿ ಶೇ 60ರಿಂದ 70ರಷ್ಟು ಮತದಾನವಾಗುತ್ತಿದೆ. 18 ವರ್ಷ ಮೇಲಿನ ಎಲ್ಲ ಅರ್ಹರೂ ಮತದಾನ ಮಾಡಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, 1950ರಲ್ಲಿ ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂತು. ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತದೆ. ಜಗತ್ತಿನ 193 ದೇಶಗಳಲ್ಲಿ ಭಾರತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದರು. ಮತದಾರರ ಪಟ್ಟಿಯಲ್ಲಿ ಯುವ ಮತದಾರರು ತಮ್ಮ ಹೆಸರನ್ನು ಸೇರಿಸಬೇಕು. ಈ ಮಾಹಿತಿಯನ್ನು ತಮ್ಮ ಮಿತ್ರರಿಗೂ ತಿಳಿಸಬೇಕು. ಮತ ಹಾಕಿದರೆ ಮಾತ್ರ ನಮಗೆ ಕೇಳುವ ಹಕ್ಕು ಇರುತ್ತದೆ ಎಂದು ತಿಳಿಸಿದರು.
