ಉದಯವಾಹಿನಿ, ಕೋಲಾರ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮತದಾನಕ್ಕೆ ಹೆಚ್ಚಿನ ಮಹತ್ವವಿದೆ, ಹಣ,ಆಮಿಷಗಳಿಗೆ ಕಡಿವಾಣ ಹಾಕಿ ದೇಶಕ್ಕಾಗಿ ಉತ್ತಮ ವ್ಯಕ್ತಿಯ ಆಯ್ಕೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಕರೆ ನೀಡಿದರು.
ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಾದ ನೀವು ಮುಂದೆ ೧೮ ವರ್ಷದ ನಂತರ ಮತದಾರರಾಗುತ್ತೀರಿ, ನೀವು ನೀಡುವ ಮತ ದೇಶದ ಭವಿಷ್ಯವನ್ನು ನಿರ್ಧರಿಸುವಂತದ್ದು ಎಂಬುದನ್ನು ಅರಿತು ಪವಿತ್ರವಾದ ನಿಮ್ಮ ಹಕ್ಕು ಚಲಾಯಿಸಿ ಎಂದು ಕಿವಿಮಾತು ಹೇಳಿದರು.
ಕಡ್ಡಾಯ ಮತದಾನದ ಪ್ರತಿಜ್ಞೆ ಬೋಧಿಸಿದ ಹಿರಿಯ ಶಿಕ್ಷಕ ವೆಂಕಟರೆಡ್ಡಿ, ಚುನಾವಣೆಯಲ್ಲಿ ಹಣ,ಆಮಿಷಗಳಿಗೆ ಕಡಿವಾಣ ಹಾಕುವಲ್ಲಿ ಚುನಾವಣಾ ಆಯೋಗ ಕೆಲಸ ಮಾಡುತ್ತದೆ ಆದರೆ ಮತದಾರರಾಗಿ ನಮ್ಮ ಜವಾಬ್ದಾರಿಯೂ ಇದೆ ಎಂದರು.
ಪ್ರಜಾಪ್ರಭುತ್ವದಲ್ಲಿ ವಿಶ್ವಾಸವುಳ್ಳ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ ನ್ಯಾಯಸಮ್ಮತ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯುತ್ತೇವೆಂದು ಪ್ರತಿಜ್ಞೆ ಮಾಡೋಣ ಎಂದು ತಿಳಿಸಿದರು
ಶಿಕ್ಷಕ ಎಂ.ಆರ್.ಗೋಪಾಲಕೃಷ್ಣ ಮಾತನಾಡಿ, ಚುನಾವಣೆಯಲ್ಲಿ ನಿರ್ಭೀತಿಯಿಂದ ಧರ್ಮ,ಜನಾಂಗ,ಜಾತಿ,ಮತ,ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಂದು ಪ್ರತಿಜ್ಞೆ ಮಾq ಬೇಕು.
ದೇಶ, ಜನ, ಮೂಲ, ಸಪಸ್ಪರ ಸಂಬಂಧ, ಸಂಸ್ಕೃತಿ ತಿಳಿಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಮೇಲೆ ಉತ್ತಮ ಸಮಾಜಕ್ಕೆ ಬೇಕಾಗುವಂತಹ ಕಾನೂನು ರಚನೆಯಾಗಿದೆ ಎಂದರು.
ಶಿಕ್ಷಕಿ ಫರೀದಾ ಮಾತನಾಡಿ, ಮತದಾನದಂದು ರಜೆ ಹಾಕಿ ಪ್ರವಾಸ ಹೋಗುವ ಮೂಲಕ ನಮ್ಮ ಹಕ್ಕಿನಿಂದ ನಾವು ವಂಚಿತವಾಗುವುದು ದೇಶಕ್ಕೆ ಮಾಡಿದ ದ್ರೋಹ ಎಂದ ಅವರು, ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು, ಮತದಾನದ ಸಂದರ್ಭದಲ್ಲಿ ರಹಸ್ಯ ಕಾಪಾಡಬೇಕೆಂದರು.
ಮತದಾನದ ಮಹತ್ವ,ವಿಧಾನ ಚುನಾವಣಾ ಆಯೋಗದ ಕಾರ್ಯಗಳು ಮತ್ತಿತರ ಅಂಶಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ವೇತಾ,ಸುಗುಣಾ,ಲೀಲಾ, ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಖರ್, ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!