ಉದಯವಾಹಿನಿ ಮಸ್ಕಿ : ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಂವಿಧಾನ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಮಸ್ಕಿ ತಾಲೂಕಿನಾದ್ಯಂತ ಫೆ. 15 ರಿಂದ 17 ರವರೆಗೆ ಸಂವಿಧಾನ ಜಾಗೃತಿ ಜಾಥಾ ಸಂಚರಿಸಲಿದೆ ಎಂದು ಮಸ್ಕಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಹೇಳಿದರು.
ಮಸ್ಕಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ, ತಾಪಂ ಆಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಸಾಮಾನ್ಯರು, ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮಹತ್ವ ತಿಳಿಸಲು ಈ ಜಾಥಾ ಸಂಚರಿಸಲಿದೆ. ಇದರ ಯಶಸ್ಸಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಿತಿ ರಚಿಸಬೇಕು. ಫೆ. 15 ರಂದು ಲಿಂಗಸುಗೂರು ತಾಲೂಕಿನಿಂದ ಕನ್ನಾಳ ಗ್ರಾಮ ಪಂಚಾಯತಿಗೆ ಸಂವಿಧಾನ ಜಾಗೃತಿ ಜಾಥಾ ಆಗಮಿಸಲಿದೆ. ಜನಪದ ಕಲಾ ತಂಡಗಳಿಂದ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು, ಸ್ವ ಸಹಾಯ ಗುಂಪುಗಳಿಗೆ ಮಾಹಿತಿ ನೀಡಿ, ಅವರು ಭಾಗವಹಿಸುವಂತೆ ಕ್ರಮಕೈಗೊಳ್ಳಬೇಕು. ನೆರಳು, ಊಟದ ವ್ಯವಸ್ಥೆ ಮಾಡಬೇಕು. ಫೆ.17 ರಂದು ಗುಂಡ ಗ್ರಾಪಂ  ಮೂಲಕ ಸಿಂಧನೂರಿಗೆ ಜಾಥಾ ತೆರಳಲಿದೆ ಎಂದರು. ತಹಸೀಲ್ದಾರ್ ಅರಮನೆ ಸುಧಾ ಮಾತನಾಡಿ, ಸಂವಿಧಾನ ವಿಷಯ ಕುರಿತು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ನಾಟಕ ಪ್ರದರ್ಶನ ಆಯೋಜಿಸಿ, ಸಂವಿಧಾನದ ಮಹತ್ವ ತಿಳಿಸಬೇಕು ಎಂದರು.ಈ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಸಂವಿಧಾನ ಜಾಗೃತಿ ಜಾಥಾದ ನೋಡಲ್ ಅಧಿಕಾರಿಗಳಾದ ಸೋಮಶೇಖರ್ ಹೊಕ್ರಾಣಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದೇವರಾಜ್, ಮಸ್ಕಿ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ತಾಲೂಕು ಯೋಜನಾ ನಿರ್ದೇಶಕರಾದ ಇಬ್ರಾಹಿಂ ಪಟೇಲ್, ತಾಪಂ ಸಿಬ್ಬಂದಿ ಗಂಗಾಧರ ಮೂರ್ತಿ, ನವೀನ್, ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತುರ್ವಿಹಾಳ ವಲಯದ ಸಹಾಯಕ ನಿರ್ದೇಶಕರಾದ ಅಶೋಕ, ಕಂದಾಯ ಇಲಾಖೆಯ ಗುರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!