ಉದಯವಾಹಿನಿ, ಲಕ್ಷ್ಮೇಶ್ವರ : ತಾಲ್ಲೂಕಿನ ಶಿಗ್ಲಿ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಜನವರಿ 26ರ ಧ್ವಜಾರೋಹಣ ವಿಷಯದಲ್ಲಿ ಮುಖ್ಯ ಶಿಕ್ಷಕಿ ಮತ್ತು ಸಹಶಿಕ್ಷಕರ ನಡುವೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿಯ ಕೊಠಡಿಗೆ ಸಹಶಿಕ್ಷಕರು ಶುಕ್ರವಾರ ಬೀಗ ಹಾಕಿದರು. ಕೆಲ ದಿನಗಳಿಂದ ಮುಖ್ಯ ಶಿಕ್ಷಕಿ ಎನ್.ಎಂ. ಕೊಟಗಿ ಮತ್ತು ಶಿಕ್ಷಕರಲ್ಲಿ ಭಿನ್ನಾಭಿಪ್ರಾಯ ಮುಂದುವರೆದಿದೆ. ಮುಖ್ಯ ಶಿಕ್ಷಕಿಯನ್ನು ಮೂರು ದಿನಗಳಿಂದ ಹೊರಗೆ ಕುಳ್ಳಿರಿಸಲಾಗಿತ್ತು. ಮುಖ್ಯ ಶಿಕ್ಷಕಿ ಕೂಡ ಹೊರಗೇ ಕುಳಿತು ಹೋಗುತ್ತಿದ್ದರು.
ಮುಖ್ಯ ಶಿಕ್ಷಕಿ ಶಾಲೆಗೆ ಬರುವುದರೊಳಗಾಗಿ ಸಹಶಿಕ್ಷಕರು ಕೊಠಡಿಗೆ ಬೀಗ ಹಾಕಿದ್ದರು. ಶಾಲೆಗೆ ಬಂದ ಅವರು ಇದನ್ನು ನೋಡಿ ವಿಚಲಿತರಾಗಿ ಬೀಗ ಹಾಕಿದ ಕೊಠಡಿ ಎದುರೇ ಕೂತರು.
‘ಶಾಲೆಯಲ್ಲಿ ಎರಡು ಹಾಜರಾತಿ ಪುಸ್ತಕ ಇವೆ. ಸಹಶಿಕ್ಷಕರು ಮನ ಬಂದಂತೆ ವರ್ತಿಸುತ್ತಾರೆ. ನನಗೂ ಹೇಳದೇ ಶಾಲೆ ಬಿಟ್ಟು ಹೋಗುತ್ತಾರೆ’ ಎಂದು ಮುಖ್ಯ ಶಿಕ್ಷಕಿ ಕೊಟಗಿ ಆರೋಪಿಸಿದರು.
ಸಿಆರ್‌ಸಿ ಜ್ಯೋತಿ ಗಾಯಕವಾಡ ಶಾಲೆಗೆ ಭೇಟಿ ನೀಡಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ‘ಶಿಕ್ಷಕರ ನಡುವೆ ಹೊಂದಾಣಿಕೆ ಇರದ ಕಾರಣ ಇಂಥ ಗಲಾಟೆ ನಡೆಯುತ್ತಲೇ ಇವೆ. ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು’ ಎಂದು ಎಸ್‍ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಪಟ್ಟು ಹಿಡಿದರು.

Leave a Reply

Your email address will not be published. Required fields are marked *

error: Content is protected !!