ಉದಯವಾಹಿನಿ , ತುಮಕೂರು: ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲ್ಲೂಕು ಹುಲ್ಲೂರು ಗ್ರಾಮದಲ್ಲಿ ಡಾನ್ಸ್ ಕೊರಿಯೋಗ್ರಾಫರ್ ಕೆಲಸ ಮಾಡುತ್ತಿದ್ದ ಸೈಯದ್ ಅಲಿ ಬಾಳಾಸಾಹೇಬ್ ನದಾಫ್ (೨೫) ಎಂಬಾತನೇ ಪೊಲೀಸರಿಂದ ತಪ್ಪಿಸಿಕೊಂಡಿರುವ ಆರೋಪಿ.
ನ್ಯಾಯಾಲಯದ ಅನುಮತಿ ಮೇರೆಗೆ ಗದಗ ಮೂಲದ ಡಕಾಯತಿ ಕೇಸಿನ ಆರೋಪಿ ಸೈಯದ್ ಆಲಿ ಬಾಳಾ ಸಾಹೇಬ್ ನದಾಫ್ ಎಂಬಾತನನ್ನು ತನಿಖೆಗಾಗಿ ಗುಬ್ಬಿ ಪೋಲಿಸ್ ಠಾಣೆಯ ಪಿಎಸ್‌ಐ ದೇವಿಕಾದೇವಿ ರವರು ಇಲಾಖೆಯ ವಶಕ್ಕೆ ಪಡೆದಿದ್ದರು. ಅಲ್ಲಿಂದ ಕರೆತಂದು ಗುಬ್ಬಿ ಪೋಲಿಸ್ ಠಾಣೆಯ ಲಾಕಪ್‌ನಲ್ಲಿ ತನಿಖೆಗಾಗಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ನಿನ್ನೆ ನ್ಯಾಯಾಲಯಕ್ಕೆ ಕರೆ ತಂದಿದ್ದ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ತಪ್ಪಿಸಿಕೊಂಡ ಆರೋಪಿ ಪತ್ತೆಗಾಗಿ ಪೋಲೀಸರು ಹರಸಾಹಸ ಪಡುತ್ತಿದ್ದಾರೆ. ತಪ್ಪಿಸಿಕೊಂಡು ಓಡಿ ಹೋದ ಆರೋಪಿಯು ವೃತ್ತಿನಿರತ ಆರೋಪಿಯಾಗಿದ್ದು, ಕಳ್ಳತನವನ್ನೇ ನಿರಂತರವಾಗಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಹೋಬಳಿ ಹುಲ್ಲೂರು ಗ್ರಾಮದ ವಾಸಿಯಾದ ಆರೋಪಿ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದು, ಕಳ್ಳತನ, ಡಕಾಯಿತಿ ಹೀಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ತಪ್ಪಿಸಿಕೊಂಡಿರುವ ಆರೋಪಿಯ ಎಡಗೈ ಮೇಲೆ ಸಿರಿಗನ್ನಡಂ ಎನ್ನುವ ಅಚ್ಚೆ ಹಾಕಿಸಿದ್ದಾನೆ. ಎಡಗೈ ಮುಂಭಾಗದಲ್ಲಿ ಸರ್ವ ಧರ್ಮದ ಚಿಹ್ನೆಗಳ ಗುರುತಿದೆ ಎಂದು ಪೊಲೀಸರು ಚಹರೆ ತಿಳಿಸಿದ್ದು, ಎಲ್ಲಿಯಾದರೂ ಸದರಿ ಆರೋಪಿ ಕಂಡು ಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
