ಉದಯವಾಹಿನಿ, ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಒಂದೊಂದು ಕ್ಷೇತ್ರವು ಅತಿ ಮುಖ್ಯ ಎಂಬುದನ್ನು ಪರಿಗಣಿಸಿರುವ ಬಿಜೆಪಿ ಪಕ್ಷ ಬಿಟ್ಟು ಹೋಗಿದ್ದ ಹಲವರನ್ನು ಪುನಃ ಮಾತೃಪಕ್ಷದತ್ತ ಸೆಳೆಯಲು ಘರ್ ವಾಪ್ಸಿ ಕಾರ್ಯಾಚರಣೆಗೆ ಧುಮುಕಿದೆ. ಇದರ ಮೊದಲ ಪ್ರಯತ್ನವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಗಾಣಿಗ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕ ಮಾಜಿ ಡಿಸಿಎಂ ಹಾಗೂ ಹಾಲಿ ಶಾಸಕ ಲಕ್ಷ್ಮಣ್ ಸವದಿಯನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.
ಇನ್ನೊಂದೆಡೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿ ಬಿಜೆಪಿಯಿಂದ ದೂರ ಉಳಿದಿದ್ದ ಮಾಜಿ ಶಾಸಕ ಜನಾರ್ಧನ ರೆಡ್ಡಿ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಬೆನ್ನಲ್ಲೇ ಇದೀಗ ಹಲವರನ್ನು ಸಂಪರ್ಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ಷದತ್ತ ಸೆಳೆದುಕೊಳ್ಳಲು ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿದ್ದಾರೆ.
