
ಉದಯವಾಹಿನಿ,ಬಳ್ಳಾರಿ: ಇಲ್ಲಿನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚೆನ್ನೈ ಮೂಲದ ‘ಮಾರ್ಗ್’ ಕಂಪನಿಯ ಜತೆ ಮಾಡಿಕೊಂಡಿರುವ ಒಪ್ಪಂದ ರದ್ದುಪಡಿಸಲು ಮೂಲಸೌಕರ್ಯ ಇಲಾಖೆ (ಐಡಿಡಿ) ಹಸಿರು ನಿಶಾನೆ ತೋರಿದೆ. ಮುಂದಿನ ಸಚಿವ ಸಂಪುಟ ಸಭೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದಲೇ (ಕೆಎಸ್‌ಐಐಡಿಸಿ) ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಸಮೀಪದ ಚಾಗನೂರಿನಲ್ಲಿ ಸ್ವಾಧೀನಪಡಿಸಿಕೊಂಡಿರುವ 900 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2010ರ ಆಗಸ್ಟ್‌ನಲ್ಲಿ ‘ಮಾರ್ಗ್’ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. 12 ವರ್ಷ ಕಳೆದರೂ ಯೋಜನೆ ಪ್ರಗತಿ ಆಗದಿದ್ದರಿಂದ ಒಪ್ಪಂದ ರದ್ದುಪಡಿಸುವಂತೆ ಹೇಳಲಾಗಿದೆ.ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರ ಸಮ್ಮುಖದಲ್ಲಿ ಬೆಂಗಳೂರಲ್ಲಿ ಶುಕ್ರವಾರ ಸೇರಿದ್ದ ಉನ್ನತ ಮಟ್ಟದ ಸಭೆಯಲ್ಲಿ, ಈ ಕುರಿತಂತೆ ಟಿಪ್ಪಣಿಯನ್ನು ಸಿದ್ಧಪಡಿಸಿ ಸಂಪುಟ ಸಭೆ ಕಾರ್ಯಸೂಚಿಯಲ್ಲಿ ಸೇರ್ಪಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರಕ್ರಿಯೆ ತ್ವರಿತಗೊಳಿಸಿ, ಒಂದು ತಿಂಗಳೊಳಗೆ ಅಂತಿಮ ರೂಪ ನೀಡಲು ನಿರ್ದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ.ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಶಾಸಕ ಎನ್.ವೈ. ಗೋಪಾಲಕೃಷ್ಣ, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ರವಿ, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ. ಪ್ರಕಾಶ್ ಮತ್ತಿತರರು ಸಭೆಯಲ್ಲಿದ್ದರು.
