
ಬೆಂಗಳೂರು: ‘ವಿಪ್ರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಸಿರಿನಾಡು ಮಹಾಸಭಾ ಕಾರ್ಯಗಳಿಗೆ ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದರು.ಸಿರಿನಾಡು ಮಹಾಸಭಾ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಂಘಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜಾಗತಿಕ ಮಟ್ಟದಲ್ಲಿ ಎಲ್ಲ ರಂಗಗಳಲ್ಲೂ ಸ್ಪರ್ಧೆ ಎದುರಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಿರಿನಾಡು ಬ್ರಾಹ್ಮಣ ಸಮುದಾಯವು ಪ್ರತಿಭೆಗಳನ್ನು ಗುರುತಿಸಿ ಮನ್ನಣೆ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುಂದಿನ 25 ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಇಡೀ ದೇಶ ಹೊಸ ವಿಕ್ರಮವನ್ನು ಸ್ಥಾಪಿಸಿ, ಉತ್ತುಂಗದ ಶಿಖರ ತಲುಪಲಿದೆ. ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಿದ್ದು, ಆ ಮೂಲಕ, ಉನ್ನತ ಶಿಕ್ಷಣ ಕೇತ್ರದಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ’ ಎಂದರು.ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ, ವಿಶ್ವ ವಿಪ್ರ ಪರಿಷತ್ ಅಧ್ಯಕ್ಷ ರಘುನಾಥ್, ಮಾನಸ ಸಮೂಹ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್.ಎಸ್. ಶಶಿಧರ್ ಕುಮಾರ್, ಸಿರಿನಾಡು ಮಹಾಸಭಾದ ಗೌರವ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಹ್ಮಣ್ಯ, ಅಧ್ಯಕ್ಷ ಸುದರ್ಶನಮ್, ಉಪಾಧ್ಯಕ್ಷರಾದ ವೆಂಕಟನಾರಾಯಣ, ಆರ್.ಎನ್. ಸತ್ಯನಾರಾಯಣ ಇದ್ದರು.