ಉದಯವಾಹಿನಿ, ಬೆಂಗಳೂರು: ಜನತಾದರ್ಶನದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು 3 ತಿಂಗಳೊಳಗಾಗಿಯೇ ಇತ್ಯರ್ಥಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿಧಾನಸೌಧದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಜನಸ್ಪಂದನದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ಈ ಹಿಂದೆ ನಡೆದ ಮೊದಲ ಜನತಾದರ್ಶನದಲ್ಲಿ 5 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅದರಲ್ಲಿ ಶೇ.98 ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಶೇ.2 ರಷ್ಟು ಮಾತ್ರ ಬಾಕಿ ಉಳಿದಿವೆ ಎಂದು ಹೇಳಿದರು.
ಇಂದಿನ ಜನತಾದರ್ಶನಕ್ಕೆ 10 ಸಾವಿರಕ್ಕಿಂತಲೂ ಹೆಚ್ಚಿನ ಜನ ಆಗಮಿಸಿದ್ದಾರೆ. ಅವರಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಮುಂದಿನ 3 ತಿಂಗಳೊಳಗಾಗಿ ಪರಿಹಾರ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾನೂನಾತ್ಮಕವಾಗಿ ಸಾಧ್ಯ ಇರುವ ಎಲ್ಲಾ ಪರಿಹಾರಗಳನ್ನೂ ಒದಗಿಸಲಾಗುವುದು. ಒಂದು ವೇಳೆ ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಸಕಾರಣಗಳ ಹಿಂಬರಹವನ್ನು ಅರ್ಜಿದಾರರ ವಿಳಾಸಕ್ಕೆ ತಲುಪಿಸುವುದಾಗಿ ಹೇಳಿದರು.ಇದು 2 ನೇ ರಾಜ್ಯಮಟ್ಟದ ಜನತಾದರ್ಶನವಾಗಿದೆ. ಇದಕ್ಕೂ ಮೊದಲು ಜಿಲ್ಲಾ ಕೇಂದ್ರಗಳಲ್ಲಿ 108 ಜನಸ್ಪಂದನಗಳನ್ನು ನಡೆಸಲಾಗಿದೆ. ಆಡಳಿತ ಬೆಂಗಳೂರಿಗೆ ಕೇಂದ್ರೀಕೃತವಾಗಬಾರದು. ಜನರ ಬಳಿಗೆ ಹೋಗಬೇಕು ಎಂಬುದು ನಮ್ಮ ಮೂಲ ಉದ್ದೇಶ. ಸಣ್ಣಪುಟ್ಟ ಸಮಸ್ಯೆಗಳಿಗೆ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲೇ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲಿ ಸಾಧ್ಯವಾಗದೇ ಹೋದರೆ ರಾಜ್ಯಮಟ್ಟದಲ್ಲಿ ಕಾನೂನುಬದ್ಧವಾದ ಪರಿಹಾರ ದೊರಕಿಸುವುದಾಗಿ ಸ್ಪಷ್ಟಪಡಿಸಿದರು.

 

Leave a Reply

Your email address will not be published. Required fields are marked *

error: Content is protected !!