ಉದಯವಾಹಿನಿ, ಕಲಬುರಗಿ: ಖಜೂರಿ ಬಾರ್ಡರ್‍ನಿಂದ ಆಳಂದಕ್ಕೆ ಸಂಪರ್ಕ ಕಲ್ಪಿಸುವ ಚಿತಲಿ ಕ್ರಾಸ್ ಮಧ್ಯದಲ್ಲಿ ಕಳಪೆ ರಸ್ತೆ ರಿಪೇರಿ ಮಾಡಲಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಈ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿರುವ ನಾಗರಿಕರು, ಖಜೂರಿ ಬಾರ್ಡರ್‍ನಿಂದ ಆಳಂದ ಮಾರ್ಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಯ ಮಧ್ಯದಲ್ಲಿ ಅಲ್ಲಲ್ಲಿ ತೆಗ್ಗುಗಳು ಬಿದ್ದಿವೆ. ಅನೇಕ ಅಪಘಾತಗಳು ಸಂಭವಿಸಿವೆ. ಅನೇಕ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ 8ನೇ ಫೆಬ್ರುವರಿ 2024ರಂದು ರಸ್ತೆಯ ಮಧ್ಯದಲ್ಲಿ ಬರುವ ಚಿತಲಿ- ತೇಲಾಕುಣಿ ಮಾರ್ಗದಲ್ಲಿ ತೆಗ್ಗು ಬಿದ್ದ ಮೂರು ಸ್ಥಳಗಳಲ್ಲಿ ರಸ್ತೆ ರಿಪೇರಿ ಮಾಡಿದ್ದಾರೆ ಆದರೆ ಅತ್ಯಂತ ಕಳಪೆ ಮಟ್ಟದಿಂದ ರಿಪೇರಿ ಮಾಡಿದ್ದಾರೆ. ರಿಪೇರಿ ಮಾಡಿದ ಕೆಲವೇ ಘಂಟೆಗಳಲ್ಲಿ ಅದು ಕಿತ್ತು ಬಂದಿದೆ. ಅಲ್ಲದೇ ರಿಪೇರಿ ಕೆಲಸಕ್ಕೆ ಕೇವಲ ಸಿಮೆಂಟ್ ಮತ್ತು ಉಸುಕು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆಳಂದ- ಖಜೂರಿ ಬಾರ್ಡರ್ ಮಧ್ಯದಲ್ಲಿ ಕಳಪೆ ರಸ್ತೆ ರಿಪೇರಿ ಮಾಡಿರುವ ಗುತ್ತಿಗೆದಾರರ ಬಿಲ್ ತಡೆ ಹಿಡಿಯಬೇಕು ಒಂದು ವೇಳೆ ಈ ಕೆಲಸವನ್ನು ವಾರ್ಷಿಕ ನಿರ್ವಹಣಾ ವೆಚ್ಚದಲ್ಲಿ ಕೈಗೊಂಡಿದ್ದರೇ ಅದನ್ನು ಕೂಡ ಇಲಾಖೆ ಮತ್ತೊಮ್ಮೆ ಉತ್ತಮ ಗುಣಮಟ್ಟದ ಸಿಮೆಂಟ್, ಉಸುಕು ಹಾಗೂ ಕಾಂಕ್ರೀಟ್ ಬಳಸಿ ರಸ್ತೆ ರಿಪೇರಿ ಮಾಡಬೇಕು. ಇಲ್ಲದಿದ್ದರೇ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಬರೆದಿರುವ ಪತ್ರಕ್ಕೆ ಬಿಜೆಪಿ ಯುವ ಮೋರ್ಚಾ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೋಳೆ, ಕರವೇ ಅಧ್ಯಕ್ಷ ಈರಣ್ಣ ಆಳಂದ, ಮಲ್ಲಿನಾಥ ಶೇಗಜೀ ಸಹಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!