ಉದಯವಾಹಿನಿ, ಬೆಂಗಳೂರು: ರಾಜ್ಯದಾದ್ಯಂತ ಇಂದು ಡ್ರಗ್ಸ್ ವಿನಾಶ ಕಾರ್ಯಕ್ರಮವನ್ನು ದಾಬಸ್‍ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯದಲ್ಲಿ ಇಂದು ಮತ್ತು ನಿನ್ನೆ ಒಟ್ಟು 5835.51 ಕೆ.ಜಿ ಗಾಂಜಾ, 7.847 ಕೆಜಿ ಎಮ್‍ಡಿಎಂಎ ಸೇರಿ ಒಟ್ಟು ಮೌಲ್ಯ 42.15 ಕೋಟಿ ರೂ. ಮೌಲ್ಯದ ವಸ್ತುಗಳನ್ನು ನಾಶಪಡಿಸಲಾಗಿದೆ. ಅಲ್ಲದೆ, 17 ಕೋಟಿ ರೂ. ಮೌಲ್ಯದ 15 ಕೆಜಿ ಓಪಿಯಮ್ ಅನ್ನು ಎನ್‍ಡಿಪಿಎಸ್ ಕಾಯ್ದೆಯನ್ವಯ ನಾಶಮಾಡಲು ಘಾಜೀಪುರಕ್ಕೆ ಕಳುಹಿಸಲಾಗಿದೆ.
ನೆಲಮಂಗಲ ತಾಲೂಕು ದಾಬಸ್‍ಪೇಟೆಯ ದೊಡ್ಡ ಬಳ್ಳಾಪುರ ರಸ್ತೆಯಲ್ಲಿರುವ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 3885.5 ಕೆಜಿ ಗಾಂಜಾ, 52.5 ಕೆಜಿ ಎಂಡಿಎಂಎ, ಎಲ್‍ಎಸ್‍ಡಿ, ಹಶಿಸ್, ಗಾಂಜಾ ಆಯಿಲ್, ಹೆರಾಯಿನ್ ಮುಂತಾದ ಮಾದಕ ವಸ್ತುಗಳು ಸೇರಿ ಒಟ್ಟು 36.65 ಕೋಟಿ ಮೌಲ್ಯದ ವಸ್ತುಗಳನ್ನು ಗೃಹಸಚಿವರು ಹಾಗೂ ಡಿಜಿ ಅಂಡ್ ಐಜಿಪಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.
ವಶಪಡಿಸಿಕೊಂಡ ಡ್ರಗ್ಸ್ ದುರುಪಯೋಗವಾಗಬಾರದು ಎಂಬ ಕಾರಣಕ್ಕೆ ಪೊಲೀಸ್ ಆಯುಕ್ತರುಗಳು, ಡಿಸಿಪಿಗಳು ಮತ್ತು ಎಸ್.ಪಿ. ಗಳ ನೇತೃತ್ವದಲ್ಲಿ ಡ್ರಗ್ಸ್ ವಿಲೇವಾರಿ ಸಮಿತಿಗಳನ್ನು ರಚಿಸಿ ಅವರ ನೇತೃತ್ವದಲ್ಲಿ ಇಂದು ಡ್ರಗ್ಸ್ ವಿನಾಶ ಕಾರ್ಯಕ್ರಮ ರಾಜ್ಯದಾದ್ಯಂತ ನಡೆಯುತ್ತಿದೆ. ಇಂದು ಕೇಂದ್ರ ವಲಯದ 6 ಜಿಲ್ಲೆಗಳ, ದಕ್ಷಿಣ ವಲಯದ 5 ಜಿಲ್ಲೆಗಳ, ಬೆಂಗಳೂರು ನಗರ ಹಾಗೂ ಮೈಸೂರು ನಗರದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.ಮಾದಕವಸ್ತು ಮಾರಾಟ-ದುರ್ಬಳಕೆಗೆ ಕ್ರಮ : ಮಾದಕ ವಸ್ತುಗಳ ಮಾರಾಟ ಮತ್ತು ದುರ್ಬಳಕೆಯನ್ನು ಹತೋಟಿಯಲ್ಲಿಡಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿಯಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.
