ಉದಯವಾಹಿನಿ, ಕಲ್ಬುರ್ಗಿ: ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಈಶ್ವರಪ್ಪ ಅವರು ನೀಡಿರುವ ಹೇಳಿಕೆಯಂತೆ ಕಾನೂನು ಜಾರಿಗೊಳಿಸಿದರೆ ಬಿಜೆಪಿಯ ಅರ್ಧದಷ್ಟು ಮಂದಿ ಖಾಲಿಯಾಗುತ್ತಾರೆ. ಆರ್‍ಎಸ್‍ಎಸ್ ಬಾಗಿಲು ಮುಚ್ಚಿಕೊಳ್ಳುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಬಿಜೆಪಿಯವರು ಕಡ್ಡಾಯ ನಿವೃತ್ತಿ ಕೊಟ್ಟಿದ್ದಾರೆ. ಅದಕ್ಕಾಗಿ ಅದು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮಗನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಉಪಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಎಂಎಲ್‍ಎ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕೊನೆಗೆ ಎಂಎಲ್‍ಎಯಾಗಲು ಟಿಕೆಟ್ ನೀಡದೇ ಬಿಜೆಪಿ ಮೂಲೆಗುಂಪು ಮಾಡಿದೆ. ಈ ಹಿಂದೆ ರಾಜಕೀಯ ಅಸ್ತಿತ್ವಕ್ಕಾಗಿ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದರು. ಅದರ ಪರಿಣಾಮ ಮೂಲೆಗುಂಪಾಗಿದ್ದಾರೆ. ವಿಶ್ರಾಂತಿಯ ಬದುಕಿನಲ್ಲಾದರೂ ನೆಮ್ಮದಿಯಾಗಿರಿ. ಬೆಳಿಗ್ಗೆ ರಾಮಾಯಣ ಓದಿ. ಮಧ್ಯಾಹ್ನ ಕೀರ್ತನಾ ಭಜನೆ ಕೇಳಿ, ರಾತ್ರಿ ಹನುಮಾನ್ ಚಾಲೀಸ ಹೇಳಿಕೊಂಡು ವಿಶ್ರಾಂತಿ ಪಡೆಯಿರಿ. ರಾಜಕೀಯ ಅಸ್ತಿತ್ವಕ್ಕಾಗಿ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಸಲಹೆ ನೀಡಿದರು.

ಬಿಜೆಪಿ ನಾಯಕರು ರಾಜ್ಯದ ಪರವಾಗಿ ಧ್ವನಿಯೆತ್ತುವುದಕ್ಕಿಂತಲೂ ಮೋದಿಯವರನ್ನು ಸಮರ್ಥಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಹಣಕಾಸು ಆಯೋಗದಿಂದ ರಾಜ್ಯಕ್ಕಾಗಿರುವ ಅನ್ಯಾಯ, ತೆರಿಗೆ ಪಾಲಿನ ಅಸಮರ್ಪಕತೆ, 25 ಸಾವಿರ ಕೋಟಿ ರೂ. ಮಧ್ಯಂತರ ಪರಿಹಾರದ ನಿರಾಕರಣೆ… ಇದೆಲ್ಲವೂ ಸತ್ಯವಲ್ಲವೇ? ಉದ್ಯೋಗ ಸೃಷ್ಟಿಸಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುವುದರಿಂದ ದೇಶದ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ. ಕೇಂದ್ರ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕಕ್ಕೆ ನ್ಯಾಯಯುತ ಪಾಲು ನೀಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!