ಉದಯವಾಹಿನಿ, ಮೈಸೂರು/ ಹಾಸನ: ಮೈಸೂರು ಭಾಗದ ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆಯು ಶುಕ್ರವಾರ ಮಧ್ಯಾಹ್ನ ಸ್ಥಗಿತಗೊಂಡಿದ್ದರಿಂದ ಆಕ್ರೋಶಗೊಂಡ ರೈತರು, ನೋಂದಣಿ ಕೇಂದ್ರಗಳ ಎದುರು ಪ್ರತಿಭಟನೆ ನಡೆಸಿದರು.
‘ನೋಂದಣಿಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಹಾಸನ ಜಿಲ್ಲೆಯ ಹಿರೀಸಾವೆ ಠಾಣೆಯಲ್ಲಿ ರೈತರು ದೂರು ಕೂಡ ದಾಖಲಿಸಿದ್ದಾರೆ.
ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ನುಗ್ಗೇಹಳ್ಳಿಯಲ್ಲಿ ಬೆಳಿಗ್ಗೆಯಿಂದಲೇ ರೈತರು ಸಾಲುಗಟ್ಟಿ ನಿಂತಿದ್ದರು. ಮಧ್ಯಾಹ್ನ 1.30ರ ನಂತರ ಸರ್ವರ್‌ನಲ್ಲಿ ನೋಂದಣಿ ಸ್ಥಗಿತಗೊಂಡಿತು.
ಹಿರೀಸಾವೆಯ ಕೇಂದ್ರದ ಎದುರು ಆಕ್ರೋಶ ವ್ಯಕ್ತಪಡಿಸಿದ ರೈತರು, ನೋಂದಣಿ ಮಾಡುತ್ತಿದ್ದವರನ್ನು ಕೇಂದ್ರದಲ್ಲಿಯೇ ಕೂಡಿ ಹಾಕಿ, ಮೇಲಧಿಕಾರಿಗಳು ಬಂದು ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.ನಂತರ ಠಾಣೆಗೆ ತೆರಳಿದ ರೈತರು, ‘600 ಜನರಿಗೆ ಟೋಕನ್ ನೀಡಿದ್ದು, 300ಕ್ಕೂ ಹೆಚ್ಚು ಜನರ ನೋಂದಣಿಯೇ ಆಗಿಲ್ಲ. ನೋಂದಣಿಯಲ್ಲಿ ಅಕ್ರಮ ನಡೆದಿದೆ’ ಎಂದು ದೂರು ನೀಡಿದ್ದಾರೆ.
‘ಸೋಮವಾರದಿಂದ ಸರದಿ ಸಾಲಿನಲ್ಲಿ ನಿಂತಿದ್ದವರ ಹೆಸರು ನೋಂದಾಯಿಸದೇ, ತಮಗೆ ಬೇಕಾದವರು, ರಾಜಕೀಯ ನಾಯಕರ ಶಿಫಾರಸು ತಂದವರ ಹೆಸರನ್ನು ನೋಂದಾಯಿಸಿದ್ದಾರೆ’ ಎಂದು ಜಿಲ್ಲೆಯ ಕೊತ್ತನಹಳ್ಳಿ ರೈತ ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು.
