ಉದಯವಾಹಿನಿ, ಹಾಸನ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ಭಾನುವಾರ ರಾಜ್ಯಕ್ಕೆ ಬರುತ್ತಿದೆ. ಅಂದಿನಿಂದಲೇ ಲೋಕಸಭೆ ಚುನಾವಣೆಯ ಮೊದಲ ಹಂತದ ಸಭೆ ಶುರುವಾಗಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಹೇಳಿದರು.ನಗರದಲ್ಲಿ ಶುಕ್ರವಾರ ಬಿಜೆಪಿ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಳಿಕ ಫೆ.17 ಮತ್ತು 18 ರಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ನಂತರ ಚುನಾವಣಾ ತಯಾರಿ ಚುರುಕು ಪಡೆಯಲಿದೆ ಎಂದು ಹೇಳಿದರು.
ಗ್ರಾಮ ಚಲೋ ಅಭಿಯಾನ ಯಶಸ್ಸಿಗೆ ಎಲ್ಲರೂ ದುಡಿಯಬೇಕು ಎಂದು ಸಲಹೆ ನೀಡಿದ ಅವರು, ಎಲ್ಲ ಮಂಡಲ ಅಧ್ಯಕ್ಷರು, ಸ್ವಯಂ ಪ್ರೇರಣೆಯಿಂದ ಕೆಲಸ ಮಾಡೋಣ. ಕೇಂದ್ರದ ಯೋಜನೆಯನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡೋಣ ಎಂದರು.
ಮೋದಿ ಅವರೇ 2024ಕ್ಕೂ ಅಧಿಕಾರ ಹಿಡಿಯಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಬಗ್ಗೆ ಜನಾಭಿಪ್ರಾಯ ತಿಳಿಯಿರಿ ಎಂದರು.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಏನೆಲ್ಲಾ ಮೋಸ ಆಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಪ್ರಮುಖವಾಗಿ ಕೃಷಿ ಸಮ್ಮಾನ್ ಅನುದಾನ ಕಡಿತ ಮಾಡಲಾಗಿದೆ. ಕೇಂದ್ರ ಸರ್ಕಾರ ನೀಡಿದ ಅಕ್ಕಿಯನ್ನು ನಮ್ಮದು ಎಂದು ಹೇಳಿಕೊಂಡು ರಾಜಕೀಯ ಮಾಡುತ್ತಿರುವುದನ್ನು ಜನರ ಗಮನಕ್ಕೆ ತರಬೇಕು ಎಂದರು.
ಅಭಿಯಾನದಲ್ಲಿ ಭಾಗಿಯಾಗುವ ಪ್ರವಾಸಿ ಕಾರ್ಯಕರ್ತರು, ತಾವು ಹೋದ ಗ್ರಾಮಗಳ ಪ್ರಮುಖರ ಭೇಟಿ ಮಾಡಬೇಕು. ಕೇಂದ್ರಕ್ಕೆ ಮೋದಿ ಬೇಕು ಎಂಬ ಭಾವನೆ ಇರುವವರು ಕಾಂಗ್ರೆಸ್‌ನಲ್ಲೂ ಇದ್ದಾರೆ. ಅವರೊಂದಿಗೂ ಮಾತನಾಡಬೇಕು ಎಂದು ಹೇಳಿದರು.
