ಉದಯವಾಹಿನಿ, ಬೆಂಗಳೂರು :  ಮಹಿಳೆಯೊಬ್ಬರ ಚಿನ್ನದ ಸರ ಕದ್ದು 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದರೋಡೆಕೋರನೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಲಾಬ್‍ಖಾನ್ ಅಲಿಯಾಸ್ ಗುಲ್ಲು(48) ಬಂಧಿತ ಆರೋಪಿ. ಕಳೆದ 1998 ಜನವರಿ 20 ರಂದು ಗುಲಾಬ್‍ಖಾನ್ ತನ್ನ 22 ನೇ ವಯಸ್ಸಿನಲ್ಲೇ ಜಯನಗರ 5 ನೇ ಬ್ಲಾಕ್‍ನಲ್ಲಿ ವಸಂತ ಎಂಬುವವರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ.
ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಆರೋಪಿಗಾಗಿ ಶೋಧ ನಡೆಸಿದರೂ ಆತ ಪತ್ತೆಯಾಗಿರಲಿಲ್ಲ. ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಹಳೆಯ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವವರ ಆರೋಪಿಗಳ ಪತ್ತೆಗೆ ಸೂಚನೆ ನೀಡಿದ್ದರು. ಅದರಂತೆ ಜಯನಗರ ಪೊಲೀಸರು ಕೇಸ್ ಫೈಲ್ ತೆಗೆದು ನೋಡಿದಾಗ ದರೋಡೆ ಪ್ರಕರಣದಲ್ಲಿ ಆರೋಪಿಯೊಬ್ಬ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು.
ತನಿಖೆ ಕೈಗೊಂಡ ಇನ್ಸ್‍ಪೆಕ್ಟರ್ ಮತ್ತು ಅವರ ಸಿಬ್ಬಂದಿ ಗುಲಾಬ್‍ಖಾನ್ ವಾಸವಾಗಿದ್ದ ಮನೆಯನ್ನು ಪತ್ತೆ ಹಚ್ಚಿ ಅವರ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಿಸಿದಾಗ ಆತ ಕನಕಪುರದಲ್ಲಿ ವಾಸ ಮಾಡುತ್ತಿರುವುದು ಗೊತ್ತಾಗಿತ್ತು. ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಆತ ಕನಕಪುರ ನಗರಸಭೆಯಲ್ಲಿ ಗುತ್ತಿಗೆ ಆಧಾರದ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿರುವುದು ತಿಳಿದುಬಂದಿತ್ತು.

ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿ ಆತ ನಗರಸಭೆಯ ಕೆಲಸದ ಜೊತೆಗೆ ರಾಮನಗರದಲ್ಲಿ ವೆಲ್ಡಿಂಗ್ ಕೆಲಸವನ್ನೂ ಕೂಡ ಮಾಡಿಕೊಂಡಿದ್ದ ಎಂದು ಗೊತ್ತಾಗಿದೆ. ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!