ಉದಯವಾಹಿನಿ, ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ನಾಳೆಯಿಂದ ಹತ್ತು ದಿನಗಳ ಕಾಲ ನಡೆಯಲಿದೆ. ಈ ವರ್ಷದ ಮೊದಲ ಅಧಿವೇಶನ ಇದಾಗಿದ್ದು, ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅಧಿವೇಶನಕ್ಕೂ ಮುನ್ನ ರಾಜ್ಯಪಾಲ ರನ್ನು ವಿಧಾನಸಭೆಯ ಸಭಾಧ್ಯಕ್ಷರು, ವಿಧಾನಪರಿಷತ್‍ನ ಸಭಾಪತಿ, ಮುಖ್ಯಮಂತ್ರಿ, ಕಾನೂನು ಸಚಿವರು ಸೇರಿದಂತೆ ಉಭಯ ಸದನಗಳ ಕಾರ್ಯದರ್ಶಿಗಳು ಸ್ವಾಗತಿಸಲಿದ್ದಾರೆ. ಮಂಗಳವಾದ್ಯದೊಂದಿಗೆ ವಿಧಾನಸಭೆ ಸಭಾಂಗಣಕ್ಕೆ ಗೌರವ ಪೂರ್ವಕವಾಗಿ ರಾಜ್ಯಪಾಲರನ್ನು ಬರಮಾಡಿಕೊಳ್ಳ ಲಾಗುತ್ತದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಸಭಾಂಗಣದಲ್ಲಿ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರನ್ನು ಬೀಳ್ಕೊಟ್ಟ ಬಳಿಕ ವಿಧಾನಸಭೆ ಕಾರ್ಯದರ್ಶಿಯವರು ವರದಿ ಮಂಡನೆ ಮಾಡಲಿದ್ದಾರೆ. ನಂತರ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕಲಾಪ ನಡೆಯಲಿದೆ.

ಇತ್ತೀಚೆಗೆ ನಿಧನರಾದ ವಿಧಾನಸಭೆಯ ಸದಸ್ಯರಾಗಿದ್ದ ನಾಗನೂರ ಕಂದಕೂರ ಮತ್ತು ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಅವರ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚನೆ ಸಲ್ಲಿಸಲಾಗುತ್ತದೆ.
ಮಂಗಳವಾರದಿಂದ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿದ್ದು, ಅಂದಿನಿಂದ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವೆ ಮಾತಿನ ಸಮರ ನಡೆಯಲಿದೆ.
ಬರ ಪರಿಹಾರ, ಜಾನುವಾರುಗಳ ಮೇವು, ಕುಡಿಯುವ ನೀರು, ವಿದ್ಯುತ್ ಅಭಾವ, ಗುಳೇ ಹೋಗದಂತೆ ಜನರಿಗೆ ಉದ್ಯೋಗ, ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆ ತಾರತಮ್ಯ ಆರೋಪ, ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆ ಸೇರಿದಂತೆ ಹತ್ತು ಹಲವು ವಿಚಾರಗಳು ಉಭಯ ಸದನಗಳಲ್ಲಿ ಪ್ರಸ್ತಾಪಗೊಂಡು ವಾಗ್ವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

error: Content is protected !!