ಉದಯವಾಹಿನಿ, ಕೊಡಿಯಾಲ : ‘ಧರ್ಮವನ್ನು ರಕ್ಷಣೆ ಮಾಡಿದರೆ ಅದೇ ಧರ್ಮ ನಮ್ಮನ್ನು ಕಾಯುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ನಾವು ನಿಸರ್ಗ ಪೂಜಕರು. ನಿಸರ್ಗದಿಂದ ಎಲ್ಲವನ್ನೂ ಪಡೆದ ನಾವು ವರ್ಷಕ್ಕೊಮ್ಮೆಯಾದರೂ ಪೂಜಿಸಬೇಕು. ಪುಣ್ಯಕೋಟಿ ಮಠದ ತುಂಗಾರತಿ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.
ಇಲ್ಲಿನ ತುಂಗಭದ್ರಾ ನದಿ ತೀರದಲ್ಲಿರುವ ಅವಿಮುಕ್ತ ತಪೋಕ್ಷೇತ್ರ ಪುಣ್ಯಕೋಟಿ ಮಠದ ವತಿಯಿಂದ ಭಾನುವಾರ ನಡೆದ 5ನೇ ತುಂಗಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾನು ಗೋಮಾತೆಯ ಸೇವಕ, ಆ ತಾಯಿಯ ಶ್ರೀರಕ್ಷೆ ಸದಾ ನನ್ನ ಮೇಲಿದೆ ಎಂದರು.
ಎಲ್ಲ ಮಠಾಧೀಶರು ಗೋಶಾಲೆ ಸ್ಥಾಪಿಸಿ ಗೋವುಗಳನ್ನು ರಕ್ಷಿಸಿ ಎಂದು ಮನವಿ ಮಾಡಿದರಲ್ಲದೆ ಗೋಮಾತೆ ಹಾಗೂ ಗಂಗಾ ಮಾತೆಯನ್ನು ಆರಾಧಿಸುವ ಪುಣ್ಯಕೋಟಿ ಮಠದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ, ಪಂಚಭೂತಗಳಲ್ಲಿ ಭಗವಂತನನ್ನು ಕಾಣುವ ಅವಕಾಶವನ್ನು ಭಾರತ ಮಾತೆ ಕರುಣಿಸಿದ್ದಾಳೆ. ನಮ್ಮ ಸಂಸ್ಕೃತಿ ಉಳಿಸುವುದರ ಜೊತೆಗೆ ಈ ಮಣ್ಣಿಗೂ ಹಾಗೂ ಪ್ರಕೃತಿ ಮಾತೆಗೆ ಗೌರವ ಸಲ್ಲಿಸಬೇಕು ಎಂದು ಆಶೀರ್ವದಿಸಿದರು.

ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಪುಣ್ಯಕೋಟಿ ಮಠ ಸರ್ವ ಸಮುದಾಯಕ್ಕೆ ಸೇರಿದೆ. ಶೀಮಠದ ಏಳಿಗೆಗಾಗಿ ಶ್ರಮಿಸುತ್ತೇನೆ. ಶ್ರೀಗಳ ಪಟ್ಟಾಧಿಕಾರ ಮುಂದಿನ ವರ್ಷ ನಡೆಯಲಿದೆ. ಶ್ರೀಮಠದ ಮುಂಭಾಗದಲ್ಲಿ ನಿರ್ಮಿಸಿರುವ ಬೂದು ನೀರು ನಿರ್ವಹಣಾ ಘಟಕದಿಂದ ದುರ್ವಾಸನೆ ಬರದಂತೆ ಕ್ರಮ ವಹಿಸುವಂತೆ ಶಾಸಕ ಪ್ರಕಾಶ್ ಕೋಳಿವಾಡರಿಗೆ ತಿಳಿಸಿದರು.
ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ‘ಸಜ್ಜನ ಜನ ನಾಯಕ’ ಪ್ರಶಸ್ತಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ‘ವಿಶ್ವಮಾತೆ ಪುಣ್ಯಕೋಟಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!