ಉದಯವಾಹಿನಿ, ಬೆಂಗಳೂರು : ರಾಜ್ಯದಲ್ಲಿ ನ್ಯಾಯದಾನದ ವ್ಯವಸ್ಥೆಯನ್ನು ಉತ್ತಮಗೊಳಿಸಿ ಗ್ರಾಮೀಣ ಜನರ ಮನೆ ಬಾಗಿಲಿಗೆ ನ್ಯಾಯದಾನ ವ್ಯವಸ್ಥೆ ಕೊಂಡೊಯ್ಯುವ ಉಪಕ್ರಮವಾಗಿ ನೂರು ಹೊಸ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ತಿಳಿಸಿದ್ದಾರೆ.ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿಂದು ಭಾಷಣ ಮಾಡಿದ ಅವರು, ರಾಜ್ಯದ ಗ್ರಾಮೀಣ ಜನರ ಮನೆಬಾಗಿಲಿಗೆ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯ ಭಾಗವಾಗಿ ಭಾರತ ಸಂವಿಧಾನದ 39ಎ ಅನುಚ್ಛೇಧದ ಅಡಿಯಲ್ಲಿ ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯ ಲಭಿಸುವಂತೆ ಮಾಡಲಿದೆ ಎಂದರು.
ಕಾನೂನು ವ್ಯವಸ್ಥೆಯ ನಿರ್ವಹಣೆಯನ್ನು ಸುನಿಶ್ಚಿತಗೊಳಿಸಲು ಬಡವರ, ಗ್ರಾಮೀಣ ಜನರ ಮನೆಬಾಗಿಲಿಗೆ ನ್ಯಾಯದಾನ ತಲುಪಿಸಲು ಗ್ರಾಮ ನ್ಯಾಯಾಲಯಗಳು ಆಧಾರವಾಗಲಿವೆ ಎಂದು ಹೇಳಿದರು. ಸಾಂವಿಧಾನಿಕ ಸಂಸ್ಥೆಗಳು ದುರುಪಯೋಗವಾಗದಂತೆ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ನಮಗೆ ಸಂವಿಧಾನವೇ ರಾಷ್ಟ್ರೀಯ ಧರ್ಮ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂಬ ದೃಢವಾದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದರು.ಕರ್ನಾಟಕವನ್ನು ಸಮೃದ್ದಿಯ ನಾಡನ್ನಾಗಿ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಶ್ರಮ ಪಡೋಣ, ಸಂವಿಧಾನದ ಆಶಯಗಳನ್ನು ಅಕ್ಷರಸಃ ಅನುಷ್ಠಾನಗೊಳಿಸಿ ಮಾನವ ಹಕ್ಕುಗಳ ರಕ್ಷಣೆಗೆ ನ್ಯಾಯ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು ಎಂದು ತಿಳಿಸಿದರು.

77 ಸಾವಿರ ಕೋಟಿ ಬಂಡವಾಳ ಹೂಡಿಕೆ: ಕಳೆದ ಎಂಟು ತಿಂಗಳಿನಿಂದಲೂ ರಾಜ್ಯಕ್ಕೆ 77 ಸಾವಿರ ಕೋಟಿ ರೂ. ಬಂಡವಾಳ ಹರಿದುಬಂದಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಕೊಳ್ಳುವಿಕೆ ಶಕ್ತಿ ಹೆಚ್ಚಾಗಿ ಆರ್ಥಿಕ ಚಟುವಟಿಕೆ ವೇಗ ಪಡೆದುಕೊಳ್ಳುತ್ತಿದೆ. ತೆರಿಗೆ ಸಂಗ್ರಹ ಹೆಚ್ಚುತ್ತಿದೆ. ಜನವರಿ ತಿಂಗಳ ಅಂತ್ಯದವರೆಗೆ ನಮ್ಮ ರಾಜ್ಯದ ಜಿಎಸ್‍ಟಿ ಸಂಗ್ರಹಣೆಯ ಬೆಳವಣಿಗೆ ದರ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು. ರಾಜ್ಯಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿಯಲ್ಲಿ 165 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 45,325 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. 42,292 ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!