ಉದಯವಾಹಿನಿ, ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿರುವ ಅನರ್ಹರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸಿದ್ದು ಸವದಿರವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಾರ್ಮಿಕರಿಗೆ ಹೆಚ್ಚು ಸೌಲಭ್ಯ ನೀಡುತ್ತಿರುವುದರಿಂದ ಹೆಚ್ಚಿನ ಜನ ನೋಂದಣಿಯಾಗಿದ್ದಾರೆ. ಹಿಂದೆ ೨೦೧೬ ರಲ್ಲಿ ನಾನು ಕಾರ್ಮಿಕ ಸಚಿವನಾಗಿದ್ದಾಗ ೧೨ ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದರು. ಈಗ ೫೩ ಲಕ್ಷ ಕಾರ್ಮಿಕ ನೋಂದಣಿಯಾಗಿದ್ದಾರೆ. ೭ ಲಕ್ಷ ಅನರ್ಹರನ್ನು ತಿರಸ್ಕಾರ ಮಾಡಿ ೪೨ ಲಕ್ಷ ಮಂದಿಗೆ ಕಾರ್ಡ್ ನೀಡಿದ್ದೇವೆ. ಕಾರ್ಡ್ ಪಡೆದಿರುವವರಲ್ಲೂ ಬಹಳಷ್ಟು ಮಂದಿ ನಕಲಿ ಫಲಾನುಭವಿಗಳು ಇದ್ದಾರೆ ಎಂಬ ಮಾಹಿತಿ ಇದೆ.
ಇದನ್ನು ಪತ್ತೆಹಚ್ಚಿ ಎಲ್ಲವರನ್ನು ಸರಿಪಡಿಸಲು ಕಾಲಾವಕಾಶ ಬೇಕಿದೆ. ಸದಸ್ಯರು ಸಹಕರಿಸಿದರೆ ಶೀಘ್ರವೇ ಎಲ್ಲವನ್ನು ನಿಯಂತ್ರಿಸುತ್ತೇವೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕ ಕಲ್ಯಾಣ ಮಂಡಳಿಯ ಕಚೇರಿ ಸ್ಥಾಪಿಸಲಾಗುವುದು. ಮಂಡಳಿಯಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ವಸತಿ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ಸಿದ್ದು ಸವದಿ ಅವರು, ಮಂಡಳಿ ವತಿಯಿಂದ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಎಲ್ಲ ಕಟ್ಟಡ ಕಾರ್ಮಿಕರಿಗೂ ಸೌಲಭ್ಯ ತಲುಪಿಸಲು ಸರ್ಕಾರ ಗಮನ ಹರಿಸಬೇಕು. ಅನರ್ಹರಿಗೆ ಕಾರ್ಡ್ ನೀಡಬಾರದು ಎಂದು ಒತ್ತಾಯಿಸಿದ್ದರು.

Leave a Reply

Your email address will not be published. Required fields are marked *

error: Content is protected !!