ಉದುಯವಾಹಿನಿ, ಹಾವೇರಿ: ‘ಜಿಲ್ಲೆಯ ರಾಣೆಬೆನ್ನೂರಲ್ಲಿ ₹112 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಹರ್ಷ ತಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
‘ರೈತರ ಹಿತರಕ್ಷಣೆ ದೃಷ್ಟಿಯಿಂದ ಎಪಿಎಂಸಿಗಳನ್ನು ಬಲಪಡಿಸಲು ಹಲವು ಯೋಜನೆ, ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಎಪಿಎಂಸಿಗಳಿಂದ ವೇ ಬ್ರಿಡ್ಜ್ ನಿರ್ಮಾಣ ನಿರ್ಧಾರ ಪ್ರಕಟಿಸಲಾಗಿದೆ. ಮನವಿಗೆ ಸ್ಪಂದಿಸಿ ಬಜೆಟ್‍ನಲ್ಲಿ ಹಲವು ಯೋಜನೆ ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ತ್ರಿಪದಿಗಳ ಮೂಲಕ ಜೀವನ ಸಾರ ಹೇಳಿದ ವಚನಕಾರ ಸರ್ವಜ್ಞನ ಸ್ಮಾರಕವನ್ನು ಹಿರೇಕೆರೂರು ತಾಲ್ಲೂಕಿನಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಸಂತ ಕನಕದಾಸ ಅಧ್ಯಯನ ಕೇಂದ್ರದ ಮೂಲಕ ತತ್ವಪದ, ಕೀರ್ತನ ಸಾಹಿತ್ಯ ಮತ್ತು ಭಕ್ತಿ ಚಳವಳಿ ಸೇರಿದಂತೆ ಸಾಹಿತ್ಯ ಸಮೀಕ್ಷೆ ಸಂಗ್ರಹಣೆ, ಪ್ರಕಟಣೆ ಮತ್ತು ಪ್ರಸಾರ ಕಾರ್ಯಗಳನ್ನು ಕೈಗೊಳ್ಳಲು ₹1ಕೋಟಿ ಮೀಸಲಿಡಲಾಗಿದೆ’ ಎಂದು ತಿಳಿಸಿದ್ದಾರೆ.
