ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ಸರ್ಕಾರಿ ನೌಕರರ ೭ನೇ ವೇತನ ಜಾರಿ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿ ಮಾಡದೇ ಇರುವುದರಿಂದ ನೌಕರ ವರ್ಗಕ್ಕೆ ಬೇಸರ ತರಿಸಿದೆ ಎಂದು ರಾಜ್ಯ ಮಹಾನಗರ ಪಾಲಿಕೆ ನೌಕರರರ ಸಂಘದ ಅಧ್ಯಕ್ಷ್ಷ ಎ. ಅಮೃತ್‌ರಾಜ್ ತಿಳಿಸಿದ್ದಾರೆ.
ನಿನ್ನೆ ತುರ್ತು ಗೋಷ್ಠಿ ನಡೆಸಿ ಮಾತನಾಡಿದ ಅವರು ೨೦೨೪-೨೦೨೫ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ನೌಕರಿಗೆ ಸಾಕಷ್ಟು ಸೌಲಭ್ಯಗಳು ಸಿಗಲಿವೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ, ಬಜೆಟ್‌ನಲ್ಲಿ ಸರ್ಕಾರಿ ನೌಕರರು, ಪಾಲಿಕೆಯ ನೌಕರರು, ಸ್ಥಳೀಯ ಸಂಸ್ಥೆ, ನಗರ ಸಭೆ, ಪುರಸಭೆ ನೌಕರರು ೭ನೇ ವೇತನ ಜಾರಿ ಮತ್ತು ಹಳೇ ಪಿಂಚಣಿಯನ್ನು ಸರ್ಕಾರ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಆಯವ್ಯಯದಲ್ಲಿ ೭ನೇ ವೇತನ ಜಾರಿ ಮತ್ತು ಹಳೇ ಪಿಂಚಣಿ ಯೋಜನೆ ಘೋಷಣೆ ಮಾಡದೆ ಇರುವುದಕ್ಕೆ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಕೂಡಲೇ ೭ನೇ ವೇತನ ಜಾರಿ ಹಾಗೂ ಹಳೇ ಪಿಂಚಣಿಯನ್ನು ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ವಿಳಂಬವಾದಲ್ಲಿ ಸಮಸ್ತ ಸರ್ಕಾರಿ ನೌಕರರು ಸೂಕ್ತ ತೀರ್ಮಾನ ಕೈಗೊಂಡು ಹೋರಾಟ ಮಾಡಲಾಗುವುದು ಎಂದು ಅಮೃತ್‌ರಾಜ್ ತಿಳಿಸಿದ್ದಾರೆ.
