ಉದಯವಾಹಿನಿ, ಬೆಂಗಳೂರು: ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ರಾಜಕೀಯ ಪಕ್ಷಗಳು ನಾಳೆಯಿಂದ ವಿಧಾನಮಂಡಲದಲ್ಲಿ ಆರಂಭವಾಗುವ ಬಜೆಟ್ ಮೇಲಿನ ಚರ್ಚೆಯಲ್ಲಿ ಹಣಾಹಣಿಯ ವಾಕ್ಸಮರಕ್ಕೆ ಸಜ್ಜುಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಬಜೆಟ್‍ನಲ್ಲಿ 55 ಸಾವಿರ ಕೋಟಿ ಬಂಡವಾಳ ವೆಚ್ಚ ಹಾಗೂ ಪಂಚಖಾತ್ರಿ ಯೋಜನೆಗೆ 52 ಸಾವಿರ ಕೋಟಿ ಹಣ ನಿಗದಿ ಮಾಡಿದ್ದಾರೆ.
ಜೊತೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ಸಾಲದ ಪ್ರಮಾಣ 1 ಲಕ್ಷ ಕೋಟಿ ರೂ. ದಾಟಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ವಿರೋಧ ಪಕ್ಷಗಳು ರಾಜ್ಯಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಹಿಂದಿನ ಸರ್ಕಾರಗಳು ಮಾಡಿದ್ದ ಸಾಲದ ಪ್ರಮಾಣವನ್ನು ಲೆಕ್ಕ ಹಾಕಿಟ್ಟುಕೊಂಡು ಸಿದ್ದರಾಮಯ್ಯ ತಿರುಗೇಟು ನೀಡಲು ಸಜ್ಜುಗೊಂಡಿದ್ದಾರೆ.
2024-25ನೇ ಸಾಲಿನಲ್ಲಿ 1.05 ಲಕ್ಷ ಕೋಟಿ ಸಾಲ ಪಡೆಯಲಾಗುತ್ತಿದೆ. ಆದರೆ ಇದನ್ನು ಸರಿಯಾದ ಮಾರ್ಗದಲ್ಲೇ ಉಪಯೋಗಿಸಲಾಗುತ್ತಿದೆ. ಬಂಡವಾಳ ವೆಚ್ಚ ಮತ್ತು ಪಂಚಖಾತ್ರಿಗಳಿಗೆ 1.07 ಲಕ್ಷ ಕೋಟಿ ವೆಚ್ಚವಾಗುತ್ತಿದೆ. ಈ ಎರಡೂ ಬಾಬ್ತುಗಳು ಒಂದು ಆಸ್ತಿ ಸೃಜನೆಯಾಗಿದ್ದರೆ, ಮತ್ತೊಂದು ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಮಹತ್ವಾಕಾಂಕ್ಷೆಯುಳ್ಳದ್ದಾಗಿದೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಳ್ಳಲು ಮುಂದಾಗಿದೆ.
ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಆರ್ಥಿಕ ತಾರತಮ್ಯದ ಬಗ್ಗೆ ಹಾಗೂ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಸಹಕಾರದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಬಜೆಟ್ ಮಂಡನೆಯಲ್ಲಿ ಹನ್ನೊಂದನೇ ಪುಟ ಓದುವ ವೇಳೆಗೆ ಜೆಡಿಎಸ್ ಮತ್ತು ಬಿಜೆಪಿ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದಿದ್ದವು. ಕೇಂದ್ರ ಸರ್ಕಾರವನ್ನು ಟೀಕಿಸಿದ್ದು ವಿರೋಧಪಕ್ಷಗಳಿಗೆ ಸಹಿಸಲಾಸಾಧ್ಯವಾಗಿತ್ತು. ಬಜೆಟ್‍ನಲ್ಲಿ ಏನೂ ಇಲ್ಲ ಎಂದು ಟ್ರೋಲಿಂಗ್ ಹಾಡು ಹಾಡಿ ಲೇವಡಿ ಮಾಡಿವೆ. ಇದಕ್ಕೆ ಮುಖ್ಯಮಂತ್ರಿಯವರು ವಿಪಕ್ಷಗಳ ತಲೆಯಲ್ಲಿ ಏನೂ ಇಲ್ಲ ಎಂದು ತಿರುಗೇಟು ನೀಡಿಯೂ ಆಗಿದೆ.
