ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿಲುವಳಿ ಸೂಚನೆಯಡಿ ಪೂರ್ವಭಾವಿ ಪ್ರಸ್ತಾಪ ಮಾಡುತ್ತಾ, ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬೋರ್‍ವೆಲ್‍ಗಳಲ್ಲಿ ಬತ್ತಿಹೋಗಿವೆ. ಅಂತರ್ಜಲ ಕುಸಿದಿದೆ. ರಾಜ್ಯದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿದ ಸಮಸ್ಯೆ ತೀವ್ರವಾಗಿದೆ. ಜಲಕ್ಷಾಮ ಉಂಟಾಗಿದೆ. ಬೇಸಿಗೆಗೂ ಮುನ್ನವೇ ಇಂಥ ಗಂಭೀರ ಪರಿಸ್ಥಿತಿಯನ್ನು ರಾಜ್ಯ ಅನುಭವಿಸುತ್ತಿದೆ.

ಕಳೆದ 30 ವರ್ಷಗಳಿಗೆ ಹೋಲಿಸಿದರೆ ಗರಿಷ್ಠ ತಾಪಮಾನ 2 ಡಿಗ್ರಿಯಷ್ಟು ಹೆಚ್ಚಾಗಿದೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಕೆಆರ್‍ಎಸ್, ಆಲಮಟ್ಟಿ ಭದ್ರ ಸೇರಿದಂತೆ ಎಲ್ಲಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಕಡಿಮೆಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟಿದೆ. ಇದು ಎಲ್ಲ ಕ್ಷೇತ್ರಗಳ ಶಾಸಕರ ಸಮಸ್ಯೆಯಾಗಿದೆ. ಸರ್ಕಾರ ತಕ್ಷಣ ಈ ವಿಚಾರದಲ್ಲಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಲಿಂಗಾಪುರ ಎಂಬ ಗ್ರಾಮದಲ್ಲಿ 1100 ಜನಸಂಖ್ಯೆ ಇದ್ದು 800 ಮಂದಿ ನೀರಿಲ್ಲದೆ ಗ್ರಾಮ ತೊರೆದು ಗುಳೇ ಹೋಗಿದ್ದಾರೆ. ಗೋವಾ, ಮಂಗಳೂರು ಕಡೆ ಉದ್ಯೋಗ ಹರಸಿ ಗುಳೇ ಹೋಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದರು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣವಿದ್ದರೆ ಹೊಸ ಬೋರ್‍ವೆಲ್ ಕೊರೆಯಲು ಸಾಧ್ಯವಿಲ್ಲ. ಇರುವ ಬೋರ್‍ವೆಲ್‍ಗಳನ್ನು ಡ್ರಿಲ್ ಮಾಡಬಹುದು ಅಷ್ಟೇ ಇನ್ನು ಮುಂದಿನ ನಾಲ್ಕು ತಿಂಗಳು ಕಷ್ಟಕರವಾಗಿದೆ. ಒಂದು 500 ರೂ.ಗಿದ್ದ ಟ್ಯಾಂಕರ್ ನೀರು 3ರಿಂದ ನಾಲ್ಕು ಸಾವಿರ ರೂ.ಗೆ ಹೆಚ್ಚಳವಾಗಿದೆ. ಹೀಗಾಗಿ ಪ್ರತಿ ಗ್ರಾಮಪಂಚಾಯ್ತಿಯಲ್ಲೂ ಹೊಸ ಬೋರ್‍ವೆಲ್ ಕೊರೆಯಲು ಅನುಕೂಲವಾಗುವಂತೆ ಆದೇಶ ಮಾಡಬೇಕು. ಪ್ರತಿ ಗ್ರಾಮಪಂಚಾಯ್ತಿಗೆ 10 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿ ಹೆಚ್ಚಿನ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!