ಉದಯವಾಹಿನಿ, ಬೆಂಗಳೂರು: ಕುಂಬಳಗೋಡು ಸಮೀಪ ಪಫ್ರ್ಯೂಮ್ ಖಾಲಿ ಬಾಟಲಿಗಳನ್ನು ಸಂಗ್ರಹಿಸಿಡಲಾಗಿದ್ದ ಗೋದಾಮಿನಲ್ಲಿ ಕುಟ್ಟಿ ಹದ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ಅವಘಡದಲ್ಲಿ ಮೂವರು ಸಜೀವ ದಹನವಾದ ಘಟನೆಗೆ ಸಂಬಂಧಿಸಿದಂತೆ ಜಾಗದ ಮಾಲೀಕನಿಗಾಗಿ ಕುಂಬಳಗೋಡು ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮೃತರನ್ನು ಸಲೀಂ, ಮೆಹಬೂಬ್ ಪಾಷ ಹಾಗೂ ಅರ್ಬಜ್ ಎಂದು ಗುರುತಿಸಲಾಗಿದೆ. ಇವರೆಲ್ಲ ಚಿಕ್ಕಬಸ್ತಿ ನಿವಾಸಿಗಳು.
ಬೆಂಕಿ ಅನಾಹುತದಲ್ಲಿ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೋಡು ಬಳಿಯ ರಾಮಸಂದ್ರದಲ್ಲಿ ವಿಠ್ಠಲ್ ಎಂಬುವವರ ಜಾಗವನ್ನು ಸಲೀಂ ಪಡೆದು ಗೋದಾಮು ಮಾಡಿ, ಪಫ್ರ್ಯೂಮ್ ಖಾಲಿ ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದರು. ಆ ಬಾಟಲಿಗಳನ್ನು ಗುಜರಿಗೆ ಹಾಕಲು ನಿನ್ನೆ ಸಂಜೆ ಕಾರ್ಮಿಕರ ಜೊತೆ ಸೇರಿ ಸಲೀಂ ಸಹ ಬಾಟಲಿಗಳನ್ನು ಕುಟ್ಟಿ ಹದ ಮಾಡುತ್ತಿದ್ದಾಗ ಏಕಾಏಕಿ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡು ಭೀಕರ ಬೆಂಕಿ ಅವಘಡ ಸಂಭವಿಸಿದೆ.
ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರಾದರೂ ಮೂವರು ಸಜೀವ ದಹನವಾಗಿದ್ದರು. ಬೆಂಕಿಯ ತೀವ್ರತೆಯಿಂದಾಗಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಎಫ್‍ಎಸ್‍ಎಲ್ ತಜ್ಞರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ವಿವರಗಳನ್ನ ಕಲೆ ಹಾಕುತ್ತಿದ್ದಾರೆ.
