ಉದಯವಾಹಿನಿ, ಬೆಂಗಳೂರು: ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ ವಿಧಾನಪರಿಷತ್‍ಗೆ ತಿಳಿಸಿದರು. ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಶಾಲೆ ಜೊತೆಗೆ ಅನುದಾನಿತ ಶಾಲೆಯನ್ನೂ ಪರಿಗಣಿಸುತ್ತೇವೆ. ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಇರುವುದರಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಂಡರು.
ಕಳೆದ ಎಂಟು ವರ್ಷಗಳಿಂದ ನೇಮಕಾತಿಯನ್ನು ಮಾಡಿಕೊಂಡಿಲ್ಲ. ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ, ಅಡ್ವೋಕೇಟ್ ಜನರಲ್‍ಜೊತೆ ಚರ್ಚಿಸಲಾಗಿದೆ. ಕಳೆದ ಎಂಟು ತಿಂಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರವೇ ನೇಮಕಾತಿ ಮಾಡುತ್ತೇವೆ, ಕೋರ್ಟ್ ಕೇಸ್ ಬಗ್ಗೆ ಕೂಡ ಹೆಚ್ಚು ಗಮನ ಕೊಡುತ್ತೇವೆ ಎಂದು ಹೇಳೀದರು.
ಅನುದಾನಿತ ಶಾಲೆಗಳಿಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರಿಂದ ಅನುಮತಿ ಪಡೆಯುವುದಷ್ಟೇ ಬಾಕಿ ಇದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆ ಎರಡಕ್ಕೂ ಒಂದೇ ಮಾನದಂಡ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಸಂಕನೂರ ಪ್ರಶ್ನೆ ಕೇಳಿ, ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ರಾಜೀನಾಮೆ ಹಾಗೂ ಇನ್ನಿತರೆ ಕಾರಣದಿಂದ 2016ರಿಂದ ಇಲ್ಲಿಯವರೆಗೂ ಎಷ್ಟು ಖಾಲಿ ಹುದ್ದೆ ಇದೆ. ಹುದ್ದೆ ಭರ್ತಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊರತೆಯಾಗಿದೆ ಎಂದು ಆಕ್ಷೇಪಿಸಿದರು.
