ಉದಯವಾಹಿನಿ,  ಬೆಂಗಳೂರು: ಹೆಚ್ಚಿನ ಬೆಲೆಗೆ ನೀರು ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ನೀರಿನ ಟ್ಯಾಂಕರ್ ಪರವಾನಿಗಿ ರದ್ದುಗೊಳಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ನಗರದ ಕೆಲ ಪ್ರದೇಶಗಳಲ್ಲಿ ಉದ್ಬವಿಸಿರುವ ಕುಡಿಯುವ ನೀರಿನ ಅಭಾವವನ್ನು ಮನಗಂಡಿರುವ ಕೆಲ ನೀರಿನ ಟ್ಯಾಂಕರ್‍ಗಳ ಮಾಲೀಕರು ಬೆಲೆ ಹೆಚ್ಚಳ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ಅವರು ಈ ಆದೇಶ ಹೊರಡಿಸಿದ್ದಾರೆ.
ಇನ್ನು ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ಬೆಂಗಳೂರು ಮಹಾನಗರಿಯಲ್ಲಿ ನೀರಿನ ಅಭಾವ ತಲೆದೋರಿದ್ದು, ಇಂದಿರಾನಗರ, ರಾಜಾಜಿನಗರ, ಸುಂಕದಕಟ್ಟೆ, ಸಿದ್ದಾರ್ಥ ನಗರ ಸೇರಿದಂತೆ ಹಲವು ಕಡೆ ನೀರು ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ ಈ ಭಾಗಗಳಲ್ಲಿ ಟ್ಯಾಂಕರ್‍ನಲ್ಲಿ ನೀರು ಪೂರೈಕೆದಾರರು ನೀರಿನ ಟ್ಯಾಂಕ್ ಒಂದಕ್ಕೆ ಇದ್ದ ಬೆಲೆಯನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. 600 ರೂ. ಇದ್ದ ಟ್ಯಾಂಕರ್ ನೀರಿನ ದರ 1000-1200 ರುಪಾಯಿ ಗೆ ಮಾರಾಟ ಮಾಡಲಾಗುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಅಕ್ರಮದ ವಿರುದ್ಧ ಕ್ರಮ ಜರುಗಿಸಲು ಹೆಚ್ಚಿನ ದರ ವಸೂಲಿ ಮಾಡುವ ಟ್ಯಾಂಕರ್ ಗಳ ಟ್ರೇಡ್ ಲೈಸೆನ್ಸನ್ನು ರದ್ದುಗೊಳಿಸಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈಗಾಗಲೇ ಎಲ್ಲಾ ವಲಯಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು, ಹೆಚ್ಚಿನ ದರ ಪಡೆಯುವ ನೀರಿನ ಟ್ಯಾಂಕರ್‍ಗಳ ಮೇಲೆ ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ. ನಿಗದಿತ ದರವನ್ನು ಪಡೆಯುವಂತೆ ಎಲ್ಲಾ ನೀರು ಮಾರಾಟಗಾರರಿಗೆ ತಿಳುವಳಿಕೆ ನೀಡಬೇಕು ಎಂದು ಸುತ್ತೋಲೆಯಲ್ಲಿ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ, ಈ ಬಗ್ಗೆ ಒಂದು ವಾರದೊಳಗಾಗಿ ಸೂಕ್ತ ಕ್ರಮ ಜರುಗಿಸಲು ಸಹ ಹೇಳಿದ್ದಾರೆ.
ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟಿದ್ದು, ನಗರದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ. ಕಾವೇರಿ ನೀರು ಕೊಡುತ್ತೇವೆ ಎಂದು ಜಲಮಂಡಳಿ ಅಳವಡಿಕೆ ಮಾಡಿರುವ ನಲ್ಲಿಗಳು ಕೇವಲ ನಾಮಕಾವಸ್ತೆಯಾಗಿದೆ. ನೀರಿನ ವಾಸನೆ ಕಂಡೆ ಈ ನಲ್ಲಿಗಳಿಗೆ ವರ್ಷಗಳನ್ನು ಸವೆಸಿವೆ.

Leave a Reply

Your email address will not be published. Required fields are marked *

error: Content is protected !!