ಉದಯವಾಹಿನಿ, ವಿಜಯಪುರ: ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಉಪನಿರ್ದೇಶಕರ ಮುನಿರಾಜು ಅವರು ನೂಲು ಬಿಚ್ಚಾಣಿಕೆದಾರರ ಸಭೆ ನಡೆಸಿದರು.
ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಬೆಳಿಗ್ಗೆ ೧೦ ಗಂಟೆಯೊಳಗೆ ರೈತರನ್ನು ಹೊರತುಪಡಿಸಿ, ನೂಲು ಬಿಚ್ಚಾಣಿಕೆದಾರರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಅವಧಿಯೊಳಗೆ ಮಾರುಕಟ್ಟೆಯೊಳಗೆ ಪ್ರವೇಶ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ಯಾವ ನೂಲುಬಿಚ್ಚಾಣಿಕೆದಾರರು ರೈತರಿಂದ ನೂಲು ಬಿಚ್ಚಾಣಿಕೆಯಾಗುವ ಕುರಿತು ಖಚಿತ ಪಡಿಸಿಕೊಳ್ಳಲು ಸ್ಯಾಂಪಲ್ ಗೂಡು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಇದರಿಂದ ರೈತರಿಗೆ ಮೋಸವಾಗುತ್ತಿದೆ. ಗೂಡು ಹರಾಜಾದ ನಂತರ ತೂಕ ಮಾಡುವಾಗ ತೂಕದ ಲೆಕ್ಕಕ್ಕೆ ಬಾರದೇ ರೈತರಿಂದ ಹೆಚ್ಚುವರಿಯಾಗಿ ಲಾಭದ ಗೂಡನ್ನು ಪಡೆದುಕೊಳ್ಳುವಂತಿಲ್ಲ. ರೈತರೂ ನೀಡುವಂತಿಲ್ಲ. ಯಾರಾದರೂ ಸ್ಯಾಂಪಲ್ ಗೂಡನ್ನು ತೆಗೆದುಕೊಂಡು ಹೋಗುವುದು ಕಂಡು ಬಂದರೆ, ಅಂತಹ ನೂಲು ಬಿಚ್ಚಾಣಿಕೆದಾರರಿಗೆ ೧೫ ದಿನಗಳವರೆಗೂ ಹರಾಜಿನಲ್ಲಿ ಭಾಗವಹಿಸದಂತೆ ಅವರ ಗುರುತಿನ ಚೀಟಿಯನ್ನು ಅಮಾನತ್ತಿನಲ್ಲಿಡಲಾಗುತ್ತದೆ.
ಹರಾಜಿನಲ್ಲಿ ಗೂಡು ಖರೀಸುವ ನೂಲು ಬಿಚ್ಚಾಣಿಕೆದಾರರಿಗೆ ಯಾರಾದರೂ ಲಾಭದ ಗೂಡು ಕೊಟ್ಟರೆ ಅಂತಹ ರೈತರ ಖಾತೆಗೆ ಜಮೆಯಾಗಬೇಕಾಗಿರುವ ಗೂಡಿನ ಹಣವನ್ನು ೧೫ ದಿನಗಳವರೆಗೂ ತಡೆಹಿಡಿಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೆಲವು ನೂಲು ಬಿಚ್ಚಾಣಿಕೆದಾರರು ಸಂಜೆಯವರೆಗೂ ಗೂಡು ತೂಕ ಮಾಡುವುದಿಲ್ಲ. ೩ ಗಂಟೆಯ ನಂತರ ತೂಕ ಮಾಡಿ, ಲಾಭದ ಗೂಡಿಗೆ ಬೇಡಿಕೆ ಇಡುತ್ತಾರೆ. ಒಂದು ವೇಳೆ ಲಾಭದ ಗೂಡು ಕೊಡದಿದ್ದರೆ ಮುಂದಿನ ಬಾರಿ ರೈತರು ಗೂಡು ತಂದಾಗ ಹರಾಜು ಮಾಡದೇ ಸತಾಯಿಸುತ್ತಾರೆ ಎನ್ನುವ ಆರೋಪಗಳಿವೆ. ಇದರಿಂದ ರೈತರು ತಮ್ಮ ಮನೆಗಳಿಗೆ ಹೋಗಲು ತಡವಾಗುವುದರ ಜೊತೆಗೆ, ಅವರಿಗೆ ನಷ್ಟವಾಗುತ್ತದೆ ಎಂದರು.

Leave a Reply

Your email address will not be published. Required fields are marked *

error: Content is protected !!