ಉದಯವಾಹಿನಿ, ಬೆಂಗಳೂರು: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕುಡಿಯುವ ನೀರಿನ ಕೆರೆ ಹಾಗು ಕೃಷಿ ಬಳಕೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಕರ್ನಾಟಕ ನೀರಾವರಿ ನಿಗಮದ ಪರಿಶೀಲನೆಯ ಹಂತದಲ್ಲಿದ್ದು, ಅನುದಾನದ ಲಭ್ಯತೆ ಆಧರಿಸಿ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಅಸುಂಡಿ, ಅಮರಾಪುರ, ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ತಗ್ಗಿನ ಬೂದಿಹಾಳ್, ಗೋಡೆಹಾಳ್ ಗ್ರಾಮಗಳ ಕುಡಿಯುವ ನೀರು ಮತ್ತು ಸಂಡೂರು ತಾಲೂಕಿ ೫೯ ಹಾಗೂ ಕೊಟ್ಟೂರು ತಾಲೂಕಿನ ೧೬ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳು ಜಾರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರ ಆಗುವುದಲ್ಲದೇ, ಅಂತರ್ಜಲಮಟ್ಟ ಸುಧಾರಣೆ ಆಗಲಿದೆ ಸರ್ಕಾರ ಈ ದಿಶೆಯಲ್ಲಿ ಏನು ಕೈಗೊಂಡಿದೆ ಎಂಬ ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ಡಿ.ಕೆ. ಶಿವಕುಮಾರ್ ಅವರು, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಅಸುಂಡಿ, ಅಮರಾಪುರ, ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ತಗ್ಗಿನ ಬೂದಿಹಾಳ್, ಗೋಡೆಹಾಳ್ ಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ೪೮.೪೯ ಕೋಟಿ ರೂಪಾಯಿ ಮೊತ್ತದ ವಿವರವಾದ ಯೋಜನೆ (ಡಿಪಿಆರ್) ಕರ್ನಾಟಕ ನೀರಾವರಿ ನಿಗಮದಲ್ಲಿದೆ. ಆದಷ್ಟು ಶೀಘ್ರದಲ್ಲಿ ಯೋಜನೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಿಂಧವಾಳ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಅಸುಂಡಿ, ಲಿಂಗದೇವನಹಳ್ಳಿ ಮತ್ತು ಕಕ್ಕಬೇವಿನಹಳ್ಳಿ ಗ್ರಾಮಗಳ ಸಮೀಪ ಕಿರು ಸೇತುವೆ ನಿರ್ಮಾಣ ಕಾಮಗಾರಿಯೂ ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿದೆ ಎಂದು ವಿವರಿಸಿದರು.
ಸಂಡೂರು ತಾಲೂಕಿನ ೪೦ ಹಳ್ಳಿಗಳ ಅಂತರ್ಜಲ ಮಟ್ಟ ಸುಧಾರಣೆಗಾಗಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಿಕ್ಕಾಗಿ ತುಂಗಭದ್ರಾ ನದಿಯಿಂದ ಸಂಡೂರು ಪಟ್ಟಣದ ಸಮೀಪ ೧.೪೩೩ ಟಿಎಂಸಿ ನೀರನ್ನು ಸಂಗ್ರಹ ಮಾಡಿ ತಾಲೂಕಿನ ೫೯ ಕೆರೆಗಳನ್ನು ತುಂಬಿಸುವ ೧೩೦೫ ಕೋಟಿ ರೂಪಾಯಿ ವೆಚ್ಚದ ಯೋಜನೆಯು ಕರ್ನಾಟಕ ನೀರಾವರಿ ನಿಗಮದಲ್ಲಿದೆ. ಮುಂದಿನ ದಿನಗಳಲ್ಲಿ ಯೋಜನೆಗೆ ಅನುಮೋದನೆ ನೀಡಲಾಗುತ್ತದೆ ಎಂದರು.

Leave a Reply

Your email address will not be published. Required fields are marked *

error: Content is protected !!