ಉದಯವಾಹಿನಿ, ಪ್ರಿಯಾಪಟ್ಟಣ : ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾಧಿಗಳ ನಡುವೆ ಸಂಭ್ರಮದಿಂದ ಶನಿವಾರ ಜರುಗಿತು.
ಗ್ರಾಮದ ಹೃದಯ ಭಾಗದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ದೇವಾಲಯದಲ್ಲಿ ಮುಂಜಾನೆಯಿಂದಲೇ ರುದ್ರಾಭೀಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಬೆಳ್ಳಿಬಸವ, ವಿಘ್ನೇಶ್ವರ ಹಾಗೂ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಗಳನ್ನು ಪೇಟೆಬೀದಿಯಲ್ಲಿ ಮೆರವಣಿಗೆ ಮಾಡಿ ರಥದ ಬಳಿಗೆ ಕೊಂಡೊಯ್ಯಲಾಯಿತು. ಬೆಳಿಗ್ಗೆ 10.45 ರಿಂದ 11. 15 ರ ವರೆಗಿನ ಶುಭ ಮೇಷ ಲಗ್ನದಲ್ಲಿ ಮೂರು ಪ್ರತ್ಯೇಕ ರಥಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೈಸೂರು ಸೇರಿದಂತೆ ನೆರೆಯ ಜಿಲ್ಲೆಗಳಿಂದಲು ಆಗಮಿಸಿದ್ದ ಸಾವಿರಾರು ಭಕ್ತರು ಉಘೇ ಮಲ್ಲಯ್ಯ, ಉಘೇ ಗಿರಿಜಮ್ಮ ಎಂಬ ಹರ್ಷೋದ್ಭಾರಗಳೊಂದಿಗೆ ರಥಗಳನ್ನು ಎಳೆದು ಪುನೀತರಾದರು. ನವದಂಪತಿಗಳು ಹಣ್ಣು-ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಜಾತ್ರೆಯ ಹಿನ್ನೆಲೆ: ಬೆಟ್ಟದಪುರದಲ್ಲಿ ಪ್ರತಿವರ್ಷವೂ ಫೆಬ್ರವರಿ ಮಾಹೆಯಲ್ಲಿ ಬರುವ ಭಾರತ ಹುಣ್ಣಿಮೆಯ ಆಶ್ಲೇಷ ನಕ್ಷತ್ರದಂದು ಭ್ರಮರಾಂಭ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಕಲ್ಯಾಣೋತ್ಸವ ನಡೆಸಿ ಮರು ದಿನ ಬೆಳಗ್ಗೆ ಮಖಾ ನಕ್ಷತ್ರದಂದು ರಥೋತ್ಸವ ನಡೆಸುವುದು ವಾಡಿಕೆಯಾಗಿದೆ. ಅದರಂತೆ ಶುಕ್ರವಾರ ರಾತ್ರಿ ವಧು-ವರರಂತೆ ಅಲಂಕೃತ ಗೊಂಡಿದ್ದ ಭ್ರಮರಾಂಭ, ಮಲ್ಲಿಕಾರ್ಜುನ ಉತ್ಸವ ಮೂರ್ತಿಗಳಿಗೆ ದೇವಾಲಯದ ಆವರಣದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಶಾಸ್ತ್ರೋಪ್ತವಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಅವಿವಾಹಿತ ಯುವಕ-ಯುವತಿಯರು ಪೂಜೆ ಸಲ್ಲಿಸಿದರು.
ಬೆಟ್ಟದ ಮೇಲಿರುವ ದೇವಾಲಯದಲ್ಲಿಯೂ ಮುಂಜಾನೆ 4 ರಿಂದಲೇ ಪೂಜಾ ವಿಧಿ-ವಿಧಾನಗಳು ಆರಂಭಗೊಂಡವು . ಸಾವಿರಾರು ಭಕ್ತಾಧಿಗಳು ಬಿರು ಬಿಸಿಲನ್ನು ಲೆಕ್ಕಿಸದೆ 3600 ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿ ದೇವರ ದರ್ಶನ ಪಡೆದು ಹರಕೆ ಕಾಣಿಕೆಗಳನ್ನು ಸಮರ್ಪಿಸಿದರು.
ಸಂಜೆ ವೇಳೆಗೆ ರಥಗಳು ಸ್ವಸ್ಥಾನಕ್ಕೆ ತಲುಪಿದ ನಂತರ ಹಂಸವಾಹನದ ಮೇಲೆ ಮೆರವಣಿಗೆ ಮಾಡಿ ಶಾಂತೋತ್ಸವ ನೆರವೇರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!