
ಉದಯವಾಹಿನಿ, ಬ್ಯಾಡಗಿ : ತಾಲೂಕಿನ ಬುಡಪನಹಳ್ಳಿ ಗ್ರಾಮದ ಪ್ರಗತಿಪರ ರೈತ, ತೋಟಗಾರಿಕೆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಬೆಳೆದು ಗಣನೀಯ ಸಾಧನೆಗೈದ ಶ್ರೇಷ್ಠ ರೈತ ಪ್ರಶಸ್ತಿಗೆ ಭಾಜನರಾದ ನ್ಯಾಯವಾದಿ ತಮ್ಮನಗೌಡ ಪಾಟೀಲ ಅವರನ್ನು ಇತ್ತೀಚೆಗೆ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ಉದ್ಯಾನನಗರಿಯಲ್ಲಿ ಜರುಗಿದ ತೋಟಗಾರಿಕೆ ಮೇಳದಲ್ಲಿ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿಯವರು ಸನ್ಮಾನಿಸಿದರು.
ವಿಧಾನ ಪರಿಷತ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಇಂದು ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಸಾವಯವ ರಾಜಕಾರಣ ಹಾಗೂ ಸಾವಯವ ಬದುಕು ಪ್ರತಿಯೊಬ್ಬರಿಗೂ ಅವಶ್ಯ. ಫಲಶ್ರೇಷ್ಠ ರೈತರನ್ನು ಗುರುತಿಸಿ ಪ್ರಶಸ್ತಿ-ಸನ್ಮಾನ ನೀಡುವ ಮೂಲಕ ಅವರನ್ನು ಪೆÇ್ರೀತ್ಸಾಹಿಸಿ ಸಮಾಜದಲ್ಲಿ ಬದಲಾವಣೆ ತರುವ ಉದ್ದೇಶದಿಂದ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ವಿಶ್ವವಿದ್ಯಾಲಯ ಕುಲಪತಿ ಅವರು ಮಾತನಾಡಿ ರಾಜ್ಯದ 23 ಜಿಲ್ಲೆಗಳಿಗೆ ತೋಟಗಾರಿಕಾ ವಿಶ್ವವಿದ್ಯಾಲಯ ಒಳಪಟ್ಟಿದ್ದರಿಂದ ಪ್ರತಿ ಜಿಲ್ಲೆಗೆ ಒಬ್ಬರಂತೆ ತೋಟಗಾರಿಕೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ರೈತರನ್ನು ಕರೆಸಿ ಸತ್ಕರಿಸುತ್ತಿರುವ ಮೂಲಕ ಕೃಷಿಕರಿಗೆ ಸಾಮಾಜಿಕ ಮಾನ್ಯತೆ ನೀಡಲಾಗುತ್ತಿದೆ. ಇಂತಹ ಮಹತ್ವದ ಕಾರ್ಯ ಸಾಧಿಸುತ್ತಿರುವ ತಮ್ಮನಗೌಡ ಪಾಟೀಲ ಸೇರಿದಂತೆ ಇತರರನ್ನು ವಿಶ್ವವಿದ್ಯಾಲಯ ಸನ್ಮಾನಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಇದರ ಪ್ರಯೋಜನವನ್ನು ರೈತರು, ರೈತ ಮಹಿಳೆಯರು, ಬೆಳೆಗಾರರು ಪಡೆದುಕೊಳ್ಳುವಂತೆ ತಿಳಿಸಿದರು.
