ಉದಯವಾಹಿನಿ, ಬೆಂಗಳೂರು: ವೃದ್ಧೆಯನ್ನು ಕೊಂದು ತುಂಡುತುಂಡಾಗಿ ಕತ್ತರಿಸಿ ಶವವನ್ನು ಡ್ರಮ್ ಒಳಗೆ ಹಾಕಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಕೆಆರ್ ಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಹಣಕ್ಕಾಗಿ ಪರಿಚಯಸ್ಥನೇ ತನ್ನ ಸಹಚರರ ಜೊತೆ ಸೇರಿ ವೃದ್ಧೆ ಹಾಗೂ ಬಿಜೆಪಿ ಕಾರ್ಯಕರ್ತೆಯೂ ಆಗಿದ್ದ ಸುಶೀಲಮ್ಮ(76) ಎಂಬುವವರನ್ನು ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆರೋಪಿಯು ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಾಲ ಮಾಡಿಕೊಂಡಿದ್ದನು. ಹಣಕ್ಕಾಗಿ ಈ ಕೊಲೆ ಮಾಡಿರುವುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ಕೆಆರ್‍ಪುರ ಸಮೀಪದ ನಿಸರ್ಗ ಲೇಔಟ್‍ನ ಅಪಾರ್ಟ್‍ಮೆಂಟ್‍ನಲ್ಲಿ ಕಳೆದ ಎಂಟು ವರ್ಷಗಳಿಂದ ಸುಶೀಲಮ್ಮ ವಾಸವಾಗಿದ್ದರು.

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಸುಶೀಲಮ್ಮ ಅವರು ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕತೆಯಾಗಿದ್ದರು. ಊರಿನಲ್ಲಿದ್ದ ಆಸ್ತಿ ಮಾರಾಟ ಮಾಡಿ ಬಂದ ಹಣದಲ್ಲಿ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಂಡು ಈ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಸುಶೀಲಮ್ಮ ಅವರು ವಾಸವಿದ್ದ ಅದೇ ಕಟ್ಟಡದಲ್ಲಿ ಕಿರಿಯ ಪುತ್ರಿ ನೆಲೆಸಿದ್ದು, ಮನೆ ಸಮೀಪವೇ ಅವರ ಮಗ ಕೂಡ ವಾಸವಿದ್ದಾರೆ.

ಈ ವೃದ್ಧೆ ಮಹಿಳೆ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಅಪಾರ್ಟ್‍ಮೆಂಟ್ ಪಕ್ಕದಲ್ಲಿದ್ದ ಪ್ಯಾಸೇಜ್ ಮಧ್ಯದಲ್ಲಿ ಖಾಲಿ ಡ್ರಮ್‍ನಲ್ಲಿ ಶವವನ್ನು ತುಂಬಿ ಪರಾರಿಯಾಗಿದ್ದಾರೆ. ಈ ನಡುವೆ ಸುಶೀಲಮ್ಮ ಅವರು ಕೆಲವೊಂದು ಬಾರಿ ಎರಡು-ಮೂರು ದಿನಗಳ ಕಾಲ ಯಾರಿಗೂ ತಿಳಿಸದೇ ಹೊರ ಹೋಗುತ್ತಿದ್ದರು. ಹಾಗಾಗಿ ಇವರು ಕಾಣದಿದ್ದಾಗ ಮಗಳು ಹೊರಗೆ ಹೋಗಿರಬಹುದೆಂದು ತಿಳಿದು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.

Leave a Reply

Your email address will not be published. Required fields are marked *

error: Content is protected !!