ಉದಯವಾಹಿನಿ, ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಪೊಲೀಸರನ್ನು ಯಾಮಾರಿಸಲು ಮಾಸ್ಟರ್ ಪ್ಲಾನ್ ಹಾಕಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಬಾಂಬ್ ಇಡಲು ಹೋಗಿದ್ದಾಗ ಶರ್ಟ್ ಮೇಲೆ ಶರ್ಟ್ ಹಾಕಿಕೊಂಡು ನಂತರ ಎಸ್ಕೇಪ್ ಆಗುವ ವೇಳೆ ಬಟ್ಟೆ ಬದಲಿಸಲು ಪ್ಲಾನ್ ರೂಪಿಸಿದ್ದನಂತೆ. ಇದರ ಜೊತೆಗೆ ಹಲವಾರು ಬಸ್ ಚೇಂಜ್ ಮಾಡಿ ಟ್ರಾವೆಲಿಂಗ್ ಮಾಡಿದ್ದ ಎಂಬ ಅಂಶವೂ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಿಕೆಟ್ ಪಡೆಯದೇ ಬಸ್‍ನಲ್ಲಿ ಪ್ರಯಾಣ ಮಾಡಿರುವ ಆರೋಪಿ ಒಂದು ಬಸ್ ಹತ್ತಿ ಮುಂದಿನ ಸ್ಟಾಪ್‍ನಲ್ಲಿ ಇಳಿದು ಮತ್ತೊಂದು ಬಸ್ ಹತ್ತಿ ನಂತರವೂ ಮುಂದಿನ ಸ್ಟಾಪ್‍ನಲ್ಲಿ ಇಳಿದಿದ್ದಾನೆ ಇದೇ ರೀತಿ 15ಕ್ಕೂ ಹೆಚ್ಚ ಬಸ್‍ಗಳಲ್ಲಿ ಆತ ಟಿಕೆಟ್ ಪಡೆಯದೆ ಸಂಚರಿಸಿದ್ದಾನೆ ಎಂದು ತಿಳಿದುಬಂದಿದೆ. ಬಟ್ಟೆ ಬದಲಿಸುವುದರ ಜೊತೆಗೆ ಹಲವಾರು ಬಸ್‍ಗಳಲ್ಲಿ ಪ್ರಯಾಣ ಮಾಡಿರುವ ಶಂಕಿತ ಹೊರ ರಾಜ್ಯಕ್ಕೆ ಎಸ್ಕೆಪ್ ಆಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಬಾಂಬ್ ಸ್ಪೋಟ ಮತ್ತು ಉಗ್ರ ಕೃತ್ಯಗಳ ತನಿಖೆಯಲ್ಲಿ ಖ್ಯಾತಿ ಗಳಿಸಿರುವ ಮಹಾರಾಷ್ಟ್ರ ಹಾಗೂ ತೆಲಂಗಾಣ ಎಟಿಸಿ ಹಾಗೂ ಕೌಂಟರ್ ಇಂಲಿಜೆನ್ಸ್ ಸೆಲ್ ಟೀಂ ಸಂಪರ್ಕದಲ್ಲಿ ಬೆಂಗಳೂರು ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ತೆಲಂಗಾಣ ಸೆಲ್ ತಂಡದವರು ಈಗಾಗಲೇ ಘಟನಾ ಸ್ಥಳದ ಸ್ಯಾಂಪಲ್ಸ ಪಡೆದು ಹೋಗಿರುವುದು ಗೊತ್ತಾಗಿದೆ.ತಮಿಳುನಾಡು, ಕೇರಳ ಹಾಗೂ ತೆಲಂಗಾಣದಲ್ಲಿ ಬೀಡುಬಿಟ್ಟಿರೋ ಬೆಂಗಳೂರು ಪೊಲೀಸರು ಆರೋಪಿಯ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.ಪಲಾಯನ ಮಾಡಿರುವ ಆರೋಪಿ ಬಂಧನಕ್ಕಾಗಿ ಸಿಸಿಬಿ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
