ಉದಯವಾಹಿನಿ, ಬೆಂಗಳೂರು: ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿರುವುದನ್ನು ನಾವು ಮುಂದಿನ ದಿನಗಳಲ್ಲೂ ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕೋದಂಡರಾಮಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪೋಲಿಯೋ ಲಸಿಕೆ ಹಾಕುವ ಅಭಿಯಾನದಲ್ಲಿ ಪಾಲ್ಗೊಂಡು ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಬೆಂಗಳೂರಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ಇಂದಿನಿಂದ ಮಾರ್ಚ್ 6ರ ವರೆಗೆ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಪೋಲಿಯೋ ಲಸಿಕಾ ಅಭಿಯಾನದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ವೈಲ್ಡ್ ಪೋಲಿಯೋ ವೈರಸ್‍ನ ಪಸರಿಸುವಿಕೆಯು ಇಂದಿಗೂ ಜಗತ್ತಿನಾದ್ಯಂತ ಮಕ್ಕಳನ್ನು ಬಾಧಿಸುತ್ತಿದೆ. ಇದರಲ್ಲಿ ನೆರೆ ರಾಷ್ಟ್ರಗಳೂ ಸೇರಿರುವುದು ಭಾರತಕ್ಕೆ ಕಳವಳಕಾರಿಯಾಗಿದೆ. ಹೀಗಾಗಿ ಪೋಲಿಯೋ ನಿರ್ಮೂಲನೆ ಸ್ಥಿತಿಯನ್ನು ಭಾರತ ಕಾಯ್ದುಕೊಳ್ಳಬೇಕಿದೆ. ಭಾರತದ ಪರಿಣಿತರ ಸಲಹಾ ಸಮೂಹದ ಶಿಫಾರಸಿನನ್ವಯ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಲಸಿಕೆ ಹಾಕಲು ರಾಷ್ಟ್ರೀಯ ಪೋಲಿಯೋ ಲಸಿಕಾ ಅಭಿಯಾನವನ್ನು ಇಂದಿನಿಂದ ಮಾರ್ಚ್ 6ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಇಂದು ಪೋಲಿಯೋ ಬೂತ್‍ಗಳಲ್ಲಿ, ಮುಂದಿನ 2 – 3 ದಿನಗಳಲ್ಲಿ ಮನೆ-ಮನೆ ಭೇಟಿಯ ಮೂಲಕ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ವಲಸಿಗ ಸಮುದಾಯದ, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿನ ಹಾಗೂ ನಗರ ಪ್ರದೇಶದ ಕೊಳಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್ ತಿಳಿಸಿದ್ದಾರೆ.
