
ಉದಯವಾಹಿನಿ,ಚಿತ್ರದುರ್ಗ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆ ಕೋಟೆನಾಡಲ್ಲಿ ಸೋಮವಾರ ಸಂಜೆ ಆರಂಭವಾಯಿತು. ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಗೆ ಹುಮ್ಮಸ್ಸು ತುಂಬಿದರು.ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಲಕ ಸೋಮವಾರ ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯನ್ನು ಯಾತ್ರೆ ಪ್ರವೇಶ ಮಾಡಿತ್ತು.ಹಿರಿಯೂರು ನಗರದ ವಾಣಿ ಪ್ರಥಮ ದರ್ಜೆ ಕಾಲೇಜಿನ ಸಮೀಪದಲ್ಲಿ ವಿಶ್ರಾಂತಿ ಪಡೆದ ಯಾತ್ರಾರ್ಥಿಗಳು ಮಧ್ಯಾಹ್ನದ ಬಳಿಕ ಪಾದಯಾತ್ರೆಗೆ ಸಜ್ಜಾದರು. ಸಂಜೆ 4 ಗಂಟೆಗೆ ಟೆಂಟ್ ನಿಂದ ಹೊರಬಂದ ರಾಹುಲ್, ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಆರಂಭಿಸಿದರು.ಯಾತ್ರೆ ಸಾಗುವ ಮಾರ್ಗ ಸಂಪೂರ್ಣ ಸಿಂಗಾರಗೊಂಡಿದೆ. ಹಿರಿಯುರು-ಹುಳಿಯಾರು ಮಾರ್ಗ ಫ್ಲೆಕ್ಸ್ ಹಾಗೂ ಬ್ಯಾನರ್ ಗಳಿಂದ ತುಂಬಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸಾವಿರಾರು ಜನರು ಯಾತ್ರೆಗೆ ಬಂದಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆ.ಎಚ್. ಮುನಿಯಪ್ಪ, ಶಾಸಕ ರಮೇಶ್ ಕುಮಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಬಿ.ಕೆ.ಹರಿಪ್ರಸಾದ್, ಎಚ್.ಆಂಜನೇಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸೇರಿ ಅನೇಕ ಗಣ್ಯರು ಪಾದಯಾತ್ರೆಯಲ್ಲಿ ರಾಹುಲ್ ಅವರಿಗೆ ಸಾಥ್ ನೀಡಿದ್ದಾರೆ.