ಉದಯವಾಹಿನಿ, ಬೆಂಗಳೂರು: ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಒಂದು ವಾರ ಬಾಕಿ ಇರುವಂತೆ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳ ಮುಖಂಡರು ಬೆವರು ಹರಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರಮೋದಿ ಅವರು ನಾಳೆ ಕರುನಾಡಿಗೆ ಲಗ್ಗೆ ಇಡಲಿದ್ದಾರೆ.
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಮೋದಿ ಅವರು ನಾಳೆ ಬಹಿರಂಗ ಪ್ರಚಾರ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿರುವ ಮೋದಿಯವರು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ಬಹಿರಂಗ ಪ್ರಚಾರವನ್ನು ನಡೆಸಲಿದ್ದಾರೆ.
ಪ್ರಧಾನಿಯವರು ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಾಳೆ ಚಿಕ್ಕಬಳ್ಳಾಪುರ (ಬೆಂಗಳೂರು-ಹೈದರಾಬಾದ್) ದ ರಾಷ್ಟ್ರೀಯ ಹೆದ್ದಾರಿ 44 ಬೈಪಾಸ್‍ನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ಹೆದ್ದಾರಿಯ ಬೈಪಾಸ್‍ನ್ನು ನಾಳೆ ಸಂಜೆಯವರೆಗೆ ಬಂದ್ ಮಾಡಲಾಗಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ಹೈದರಾಬಾದ್ ಅಥವಾ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಚದಲಪುರ, ಚೊಕ್ಕಹಳ್ಳಿ ಮುಖಾಂತರ ಚಿಕ್ಕಬಳ್ಳಾಪುರ ನಗರದ ಒಳಗೆ ಪ್ರವೇಶಿಸಿ, ನಂತರ ಚಿಕ್ಕಬಳ್ಳಾಪುರ ಹೊರಗೆ ವಾಪಸಂದ್ರ ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿ 44 ಅನ್ನು ಸಂಪರ್ಕಿಸಬಹುದು. ವಾಹನ ಸವಾರರು ಯಾವುದೇ ಕಾರಣಕ್ಕೂ ಚಿಕ್ಕಬಳ್ಳಾಪುರ ಬಳಿ ಇರುವ ಬೈಪಾಸ್ ಮೂಲಕ ಸಂಚರಿಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಚಿಕ್ಕಬಳ್ಳಾಪುರದಲ್ಲಿ ಸಂಜೆ 4 ಗಂಟೆಗೆ ಬಹಿರಂಗ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ, ಪಕ್ಷದ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಮತ ಯಾಚನೆ ಮಾಡಲಿದ್ದಾರೆ. ಬಳಿಕ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಬಹಿರಂಗ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!