ಉದಯವಾಹಿನಿ, ಸಿದ್ದಾಪುರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೂವರೆಗೆ 108 ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್‌ಡಿ) ಪ್ರಕರಣಗಳು ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2019ರಲ್ಲಿ 50 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿರುವುದು ತಿಳಿದುಬಂದಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ ನೀರಜ್ ಅವರು ಮಾತನಾಡಿ, ಜಿಲ್ಲೆಯಲ್ಲಿ ರೋಗ ಹರಡದಂತೆ ಮಾಡಲು ಹಲವು ಕ್ರಮಗಳ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸಿದ್ದಾಪುರ ಒಂದರಲ್ಲೇ 100 ಪ್ರಕರಣಗಳು ದಾಖಲಾಗಿವೆ. ಉಳಿದ ಎಂಟು ಪ್ರಕರಣಗಳು ಜೊಯಿಡಾ, ಶಿರಸಿ ಮತ್ತು ಅಂಕೋಲಾದಲ್ಲಿ ಪತ್ತೆಯಾಗಿವೆ. ಈ ವರ್ಷ ಐದು ಮತ್ತು ಒಂಬತ್ತು ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಆತಂಕದ ವಿಚಾರವೆಂದರೆ ಈ ಎಲ್ಲಾ ಸಾವುಗಳು ಸಿದ್ದಾಪುರ ತಾಲೂಕಿನಲ್ಲಿ ವರದಿಯಾಗಿದೆ.
