ಉದಯವಾಹಿನಿ, ಕಲಬುರಗಿ: ಮಹಿಳೆಯರು ತಮ್ಮ ವೃತ್ತಿ ಬದುಕಿನಲ್ಲಿ ನೈಸರ್ಗಿಕವಾಗಿ ಬರುವ ವಿರಾಮದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಮ್ಮಲ್ಲಿರುವ ಕೌಶಲ ಹಾಳಾಗದಂತೆ ಎಚ್ಚರ ವಹಿಸುವ ಮೂಲಕ ಮತ್ತೊಮ್ಮೆ ತಮ್ಮ ಬದುಕು ಮತ್ತು ಭವಿಷ್ಯ ಕಟ್ಟಿಕೊಳ್ಳಬೇಕೆಂದು ಐ.ಐ.ಇ.ಎಸ್.ಟಿ ಚೇರ್ ಪರ್ಸನ್ ಹಾಗೂ ಅದಮ್ಯ ಚೇತನ ಸಂಸ್ಥಾಪಕ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್ ಕಿವಿಮಾತು ಹೇಳಿದರು.
ಇಲ್ಲಿನ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಎಸ್.ಎ.ಸಿ ಸಭಾಂಗಣದಲ್ಲಿ ಕಾಲೇಜಿನ 12ನೇ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಂದು ಮಹಿಳೆಯರು ಉದ್ಯೋಗ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೊರುತ್ತಿದ್ದಾರೆ. ಈ ಮಧ್ಯೆ, ಮದುವೆ, ಸಂಸಾರ ಇತ್ಯಾದಿ ನೈಸರ್ಗಿಕ ವಿರಾಮದ ವೇಳೆ ತಮ್ಮಲ್ಲಿರುವ ಕೌಶಲ ಒರೆಗೆ ಹಚ್ಚದೆ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಎಚ್ಚರ ವಹಿಸುವ ಮೂಲಕ ತಮ್ಮೊಳಗಿನ ಕೌಶಲ ಕಾಣೆಯಾಗದಂತೆ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.ಉದ್ಯೋಗ ಎಂದರೆ ಕೇವಲ ಕಾಪೆರ್Çರೇಟ್ ಜಗತ್ತು ಎಂಬ ಭ್ರಮೆಯಿಂದ ಹೊರಬಂದು ಉದ್ಯಮ ಜಗತ್ತು, ಸಾಮಾಜಿಕ ಸೇವೆ, ಕಲಾ ಮಾಧ್ಯಮ, ಬೋಧನೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಲು ಮುಂದಾಗಬೇಕೆಂದು ಕರೆ ನೀಡಿದರು. ಇಂದು ಭಾರತ ದ್ವಿದಳ ಧಾನ್ಯ ಮತ್ತು ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಸೂಚ್ಯಂಕದಲ್ಲಿ 104ನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಇಂಜಿನಿಯರಿಂಗ್ ಉತ್ತೀರ್ಣರಾದ ಪದವೀಧರರು ಗಂಭೀರವಾಗಿ ಯೋಚಿಸಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಇದು ಕೇವಲ ಬಡತನಕ್ಕೆ ಸಂಬಂಧಿಸಿದ ವಿದ್ಯಮಾನವಲ್ಲ; ಬದಲಿಗೆ ಬದಲಾದ ಆಹಾರ ಕ್ರಮಕ್ಕೂ ಸಂಬಂಧಿಸಿದೆ ಎಂದು ಸೂಚ್ಯವಾಗಿ ನುಡಿದರು. ಪಿಡಿಎ ಮಾಜಿ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಅನ್ ಡಾಕ್ಡ್ ಸಂಸ್ಥೆಯ ಚೇರ್ಮನ್ ರವಿ ಜೋಶಿ ಅವರು ಪದವಿ ಪ್ರದಾನ ಸಮಾರಂಭದ ಪ್ರಮುಖ ಭಾಷಣಕಾರರಾಗಿ ಮಾತನಾಡಿ, ಯಾವುದೇ ಕಾರಣಕ್ಕೂ ನಮ್ಮ ಸಾಂಸ್ಕøತಿಕ ಬೇರುಗಳನ್ನು ನಿರ್ಲಕ್ಷಿಸದೆ ಜೀವನದ ಉದ್ದೇಶ ಏನು ಎಂಬುದನ್ನು ಅರಿತು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
