ಉದಯವಾಹಿನಿ, ಬೆಂಗಳೂರು : ಕುಡಿದು ಬಂದು ರಸ್ತೆ ಬದಿ ಮಲಗುತ್ತಿದ್ದ ವ್ಯಕ್ತಿಗಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ನಟೋರಿಯಸ್ ಕೊಲೆಗಾರನನ್ನು ಬಂಧಿಸುವಲ್ಲಿ ಬನಶಂಕರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತ ಕೊಲೆಗಾರನನ್ನು ಸುಬ್ರಮಣ್ಯಪುರದ ವಸಂತಪುರ ಗುಡ್ಡೆ ನಿವಾಸಿ ಗಿರೀಶ ಅಲಿಯಾಸ್ ಗಿರಿ(26) ಎಂದು ಗುರುತಿಸಲಾಗಿದೆ. ಕುಡಿದು ಬಂದು ರಸ್ತೆ ಬದಿ ಮಲಗಿದ್ದ ಇಬ್ಬರು ವ್ಯಕ್ತಿಗಳನ್ನು ಕಳೆದ ಒಂದು ವಾರದಲ್ಲಿ ಕೊಲೆ ಮಾಡಿ ಗಿರಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಮೇ 12ರಂದು ಬನಶಂಕರಿ ಪೊಲೀಸ್‌ಠಾಣೆ ವ್ಯಾಪ್ತಿಯ ಜಯನಗರ 7 ನೇ ಬಡಾವಣೆಯಲ್ಲಿ ಕುಡಿದ ಮತ್ತಿನಲ್ಲಿ ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಅದೇ ರೀತಿ ಮೇ 18ರಂದು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್ ಒಂದರಲ್ಲಿ ಮಲಗಿದ್ದ ಮತ್ತೊಬ್ಬ ವ್ಯಕ್ತಿಯ ತಲೆ ಮೇಲೂ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.
ಈ ಎರಡು ಪ್ರಕರಣಗಳಲ್ಲಿ ಒಬ್ಬನೆ ಕೊಲೆಗಾರ ಇರಬಹುದು ಎಂಬ ಶಂಕೆ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ಬನಶಂಕರಿ ಪೊಲೀಸರು ಆರೋಪಿ ಗಿರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಿರಿ ತಂದೆ ಮುರುಳಿಧರ ಎಂಬುವರು ಹತ್ತು ವರ್ಷದ ಹಿಂದೆ ಪತ್ನಿ ಮತ್ತು ಮಕ್ಕಳನ್ನು ತೊರೆದು ಬೇರೊಂದು ವಿವಾಹವಾಗಿ ಬೇರೆ ಕಡೆ ನೆಲೆಸಿದ್ದ ಪತಿಯ ಈ ಧೋರಣೆಯಿಂದ ನೊಂದಿದ್ದ ಪತ್ನಿ ಆಶಾ ವಸಂತಪುರದಲ್ಲಿದ್ದ ತಮ ಮನೆ ಮಾರಾಟ ಮಾಡಿ ಮಗಳೊಂದಿಗೆ ಕೇರಳಕ್ಕೆ ಹೋಗಿ ನೆಲೆಸಿದ್ದರು.ಆದರೆ, ಗಿರಿ ಮಾತ್ರ ತಾಯಿಯೊಂದಿಗೆ ಕೇರಳಕ್ಕೆ ಹೋಗದೆ ಕಳೆದ 2015ರಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
