ಉದಯವಾಹಿನಿ, ಬೆಂಗಳೂರು: ವಿಷಯಾಧಾರಿತವಾಗಿ ಚರ್ಚೆ ನಡೆಸುವ ಬದಲಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರ ವೈಯಕ್ತಿಕ ತೇಜೋವಧೆಗೆ ಇಳಿದಿರುವುದು ಖಂಡನೀಯ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಕಿಡಿಕಾರಿದ್ದಾರೆ.
ಕಾಂಗ್ರೆಸ್‌‍ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಬಂಗಾರಪ್ಪ ಹಿಂದುಳಿದ ವರ್ಗಗಳ ನಾಯಕ. ವಿಜಯೇಂದ್ರ ಅವರಿಗೆ ಹಿಂದುಳಿದ ವರ್ಗದವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿಯೇ ಅವರದೇ ಪಕ್ಷದ ಕೆ.ಎಸ್‌‍.ಈಶ್ವರಪ್ಪ ಅವರನ್ನು ಮೂಲೆಗುಂಪು ಮಾಡಿ, ಹೀನಾಯವಾಗಿ ಟೀಕೆ ಮಾಡಿ ಅಪಮಾನ ಮಾಡಿದ್ದಾರೆ ಎಂದರು.
ಬಿಜೆಪಿ ಕಟ್ಟುವುದರಲ್ಲಿ ಯಡಿಯೂರಪ್ಪ ಅವರಿಗೆ ಸರಿಸಮಾನವಾಗಿ ಈಶ್ವರಪ್ಪ ಕೆಲಸ ಮಾಡಿದರು. ಅವರನ್ನು ಕರ್ನಾಟಕದ ಅಡ್ವಾಣಿ ಎಂದು ಕರೆಯಲಾಗುತ್ತಿತ್ತು. ಅವರು ಸಂಘಟಿಸಿದ ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಮಾಡಿದ್ದೇನು ಎಂದು ಜನ ನೋಡಿದ್ದಾರೆ ಎಂದರು.
ಮಧುಬಂಗಾರಪ್ಪ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಉಳಿಸುವಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಅವರು ಶ್ಲಾಘನಾರ್ಹರು.ಈ ಹಿಂದೆ ಬಹಳಷ್ಟು ಜನ ಸಾಮೂಹಿಕ ನಕಲು ಮಾಡುತ್ತಿದ್ದುದು ಬಹಿರಂಗ ಸತ್ಯ. ಮಧುಬಂಗಾರಪ್ಪ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಸಿಸಿ ಟಿವಿ ಹಾಕಿ ಮಾಸ್‌‍ ಕಾಪಿ ತಪ್ಪಿಸಿದ್ದಾರೆ.
ಇದರಿಂದಾಗಿ ಎಸ್‌‍ಎಸ್‌‍ಎಲ್‌ಸಿ ಫಲಿತಾಂಶ ಕಡಿಮೆಯಾಗಿದೆ. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಇದರ ಸಕಾರಾತಕ ಪರಿಣಾಮ ಗೋಚರಿಸಲಿದೆ. ಮೂರು ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಪಾಸಾಗಲು ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!