ಉದಯವಾಹಿನಿ, ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಶೌಚಾಲಯದ ಕನ್ನಡಿ ಮೇಲೆ ವಿಮಾನ ನಿಲ್ದಾಣದೊಳಗೆ ಬಾಂಬ್ ಇರಿಸಿರುವ ಸಂದೇಶ ಬರೆಯಲಾಗಿದ್ದು, ಕೆಲ ಕಾಲ ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು.
ಇಂದು ಬೆಳಗ್ಗೆ ಬೆಳಗಿನ ಜಾವ 3.40ರ ಸುಮಾರಿಗೆ ಈ ಸಂದೇಶ ಬರೆಯಲಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳ ತೀವ್ರ ತಪಾಸಣೆ ನಡೆಸಿದರು. ನಂತರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಇದು ಹುಸಿ ಬಾಂಬ್​ ಬೆದರಿಕೆ ಎಂದು ಘೋಷಿಸಲಾಯಿತು.
ವಿಮಾನ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಹದಿನೈದು ದಿನಗಳ ಅವಧಿಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿರುವ ಎರಡನೇ ಹುಸಿ ಬಾಂಬ್​ ಬೆದರಿಕೆ ಇದಾಗಿದೆ.

ಭದ್ರತಾ ಅಧಿಕಾರಿಯೊಬ್ಬರ ಪ್ರಕಾರ, ವಿಮಾನ ನಿಲ್ದಾಣದ ಆಲ್ಪಾ 3 ಬಿಲ್ಡಿಂಗ್​ನಲ್ಲಿನ ಶೌಚಾಲಯದ ಕನ್ನಡಿ ಮೇಲೆ 25 ನಿಮಿಷದಲ್ಲಿ ಕಟ್ಟಡಗಳು ಸ್ಟೋಟವಾಗುವುದಾಗಿ ಬೆದರಿಕೆ ಸಂದೇಶ ಬರೆಯಲಾಗಿತ್ತು. ಬೆಳಗ್ಗೆ ಶೌಚಾಲಯಕ್ಕೆ ಸಿಬ್ಬಂದಿ ತೆರಳಿದ ವೇಳೆ ಬರಹವನ್ನು ನೋಡಿದ್ದಾರೆ. ಕೂಡಲೆ ಈ ವಿಚಾರವನ್ನು ಭದ್ರತಾ ಪಡೆಗೆ ತಿಳಿಸಿದ್ದಾರೆ. ಬೆದರಿಕೆ ಸಂದೇಶದಿಂದ ಸಿಬ್ಬಂದಿ ಹಾಗೂ ಭದ್ರತಾ ಪಡೆ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ನಮ್ಮ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಮತ್ತು ಸ್ನಿಫರ್ ಡಾಗ್‌ಗಳನ್ನು ತಕ್ಷಣವೇ ಕಾರ್ಯಗತಗೊಳಿಸಲಾಯಿತು. ನಮ್ಮ ಅನೇಕ ಸಿಬ್ಬಂದಿಗಳು ತಪಾಸಣೆಯನ್ನು ತೀವ್ರಗೊಳಿಸಿದರು. ತೀವ್ರ ಪರಿಶೀಲನೆ ನಂತರ ಇದು ಹುಸಿ ಬಾಂಬ್​ ಬೆದರಿಕೆ ಎಂದು ತಿಳಿದು ಬಂತು ಎಂದು ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!