ಉದಯವಾಹಿನಿ, ಹೊಸಪೇಟೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಪೊಲೀಸ್ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಕಾನೂನು ಸೇವೆಗಳ ಪ್ರಾದಿಕಾರ, ಭಾರತಿಯ ದಂತ ವೈದ್ಯಕೀಯ ಸಂಘ ಹೊಸಪೇಟೆ ಮತ್ತು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಮೇ 31ರಂದು ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಅವರಣದಲ್ಲಿ ಜಾಥಾಕ್ಕೆ ಗೌರವಾನ್ವಿತ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಹೊಸಪೇಟೆ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್‍ಬಾಬು ಬಿ.ಎನ್ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಭಾರತವನ್ನು ತಂಬಾಕು ಮುಕ್ತ ದೇಶವನ್ನಾಗಿ ಮಾಡುವುದು, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ‘ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸಿ’ ಎಂಬುದು ಪ್ರಸ್ತುತ ವರ್ಷದ ಘೋಷವಾಕ್ಯವಾಗಿದೆ. ಅದರಂತೆ ಮಕ್ಕಳನ್ನು ತಂಬಾಕಿನಿಂದ ದೂರವಿಡುವುದರಿಂದ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಬಹುದಾಗಿದೆ. ತಂಬಾಕು ಉತ್ಪಾದನೆಯಿಂದ ಅಂತ್ಯದವರೆಗೂ ಪರಿಸರಕ್ಕೆ ಹಾಗೂ ಮನುಷ್ಯರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದೆ. ಹಾಗಾಗಿ ಉತ್ತಮ ಸಮಾಜ, ಪರಿಸರ ಹಾಗೂ ಆರೋಗ್ಯಕ್ಕಾಗಿ ತಂಬಾಕು ತ್ಯಜಿಸಿ ಎಂದು ಹೇಳಿದರು.
