ಉದಯವಾಹಿನಿ, ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡುತ್ತಿದ್ದು, ಜಾರಕಿಹೊಳಿ ಕುಟುಂಬ ಮತ್ತೆ ಚರ್ಚೆಯಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಅಭ್ಯರ್ಥಿಯಾಗಿದ್ದ ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಗೆಲುವು ಕಂಡಿದ್ದಾರೆ.ಬೆಳಗಾವಿಯಿಂದ ಅಭ್ಯರ್ಥಿಯಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ಸೋಲು ಕಂಡಿದ್ದಾರೆ. ಈ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಮತ್ತೆ ಜಾರಕಿಹೊಳಿ ಕುಟುಂಬದ ಅಧಿಪತ್ಯ ಹೆಚ್ಚಾಗಿದೆ ಎಂಬ ಅಭಿಪ್ರಾಯಗಳಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಸತೀಶ್‌ ಜಾರಕಿಹೊಳಿ, ರಾಜ್ಯಾದ್ಯಂತ ಫಲಿತಾಂಶ ಹಿನ್ನಡೆಗೆ ಚುನಾವಣೆ ನಾಯಕತ್ವ ವಹಿಸಿದ್ದ ನಿರ್ದೇಶಕರು, ನಿರ್ಮಾಪಕರು ಹೊಣೆಯಾಗುತ್ತಾರೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಪರೋಕ್ಷ ಅಸಹನೆ ಹೊರಹಾಕಿದರು.
ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌‍ನ ಕಾರ್ಯಕರ್ತರಿಗೆ ಟಿಕೆಟ್‌ ಕೊಡಬೇಕು ಎಂದು ಸತೀಶ್‌ ಜಾರಕಿಹೊಳಿ ಹಲವು ಬಾರಿ ಪ್ರತಿಪಾದಿಸಿದ್ದರು. ಆದರೆ ಲಕ್ಷ್ಮೀ ಹೆಬ್ಬಾಳ್ಕರ್‌ ರಾಜ್ಯಮಟ್ಟದಲ್ಲಿ ತಮ ಪ್ರಭಾವ ಬೆಳೆಸಿಕೊಂಡು ಪುತ್ರ ಮೃಣಾಲ್‌ನನ್ನು ಕಣಕ್ಕಿಳಿಸಲು ಲಾಬಿ ಮಾಡಿದ್ದರು.
ಒಂದು ವೇಳೆ ಮೃಣಾಲ್‌ಗೆ ಟಿಕೆಟ್‌ ಕೊಟ್ಟು ಜಾರಕಿಹೊಳಿ ಕುಟುಂಬಕ್ಕೆ ಅವಕಾಶ ಸಿಗದೇ ಇದ್ದರೆ ಫಲಿತಾಂಶದಲ್ಲಿ ಏರುಪೇರಾಗಲಿದೆ ಎಂಬ ಆತಂಕದಲ್ಲಿ ಕಾಂಗ್ರೆಸ್‌‍ನ ವರಿಷ್ಠರು ಸತೀಶ್‌ ಜಾರಕಿಹೊಳಿ ಪುತ್ರಿಗೂ ಬಿ ಫಾರಂ ಕೊಟ್ಟು ಕೈ ತೊಳೆದುಕೊಂಡರು.

 

Leave a Reply

Your email address will not be published. Required fields are marked *

error: Content is protected !!