ಉದಯವಾಹಿನಿ, ಹಾಸನ: ನಟೋರಿಯಸ್ ರೌಡಿ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ನಾಲ್ವರು ಕೊಲೆಗಾರರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರೀತಮ್ (೨೭), ಕೀರ್ತಿ(೨೬), ರಂಗನಾಥ್ ಅಲಿಯಾಸ್ ರಂಗ(೨೬) ಹಾಗೂ ಅಮಿತ್ ಆಲಿಯಾಸ್ ಅಮ್ಮಿ (೩೧) ಬಂಧಿತ ಆರೋಪಿಗಳಾಗಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದ ಮಾರನೇ ದಿನ ನೀರು ತರಲೆಂದು ಹೋಗಿದ್ದ ರೌಡಿ ಚೈಲ್ದ್ ರವಿಯನ್ನು ಕಾರಿನಲ್ಲಿ ಬಂದು ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು ಕೊನೆಗೂ ನಗರದ ಹೊರವಲಯದ ಗ್ಯಾರಳ್ಳಿ ಬಳಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ಕಳೆದ ಜೂ. ೫ರ ಮುಂಜಾನೆ ೭ ಗಂಟೆ ೫೦ ನಿಮಿಷಕ್ಕೆ ರೌಡಿ ಶೀಟರ್ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮೃತ ರೌಡಿಶೀಟರ್ ಎರಡು ಕೊಲೆ ಸೇರಿ ಏಳು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಇತ್ತ ಈಗಾಗಲೇ ಮೂರು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಪ್ರೀತಮ್ ಹಾಗೂ ರವಿ ನಡುವೆ ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ಪೈಪೋಟಿ ಶುರುವಾಗಿತ್ತು. ಇದೇ ವಿಚಾರಕ್ಕೆ ರವಿ ಕೊಂದರೆ ತಾನೇ ಡಾನ್ ಆಗುತ್ತೇನೆ ಎಂದು ಪ್ರೀತಮ್ ಹೇಳಿಕೊಂಡಿದ್ದ. ಅದರಂತೆ ಆತನನ್ನು ಕೊಲೆ ಮಾಡಲು ಸ್ಕೇಚ್ ಹಾಕಿ ತನ್ನ ಸಹಚರರೊಂದಿಗೆ ಜೂ.೫ರಂದು ಬೆಳ್ಳಂ ಬೆಳಗ್ಗೆ ಬಂದು ಚೈಲ್ಡ್ ರವಿಯನ್ನು ಹತ್ಯೆಮಾಡಿದ್ದರು.

ಚೈಲ್ಡ್ ರವಿ ಹಿನ್ನೆಲೆ: ಹಾಸನದಲ್ಲಿ ನಟೋರಿಯಸ್ ರೌಡಿಯಾಗಿದ್ದ ೪೫ರ ಹರೆಯದ ರವಿ ಅಲಿಯಾಸ್ ಚೈಲ್ಡ್ ರವಿ ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದರಿಂದ ಚೈಲ್ಡ್ ರವಿ ಎನ್ನುವ ಕುಖ್ಯಾತ ಪಡೆದಿದ್ದ ಆತ ಬಳಿಕ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿ ೨೦೧೪ ರಲ್ಲಿ ನಗರದ ಸಹ್ಯಾದ್ರಿ ವೃತ್ತದಲ್ಲಿ ಕುಖ್ಯಾತ ರೌಡಿ ಸ್ಲಂ ಮಂಜನ ಕೊಲೆಗೈದು ಮತ್ತೆ ಜೈಲು ಸೇರಿದ್ದ. ಬಳಿಕ ೨೦೧೬ರಲ್ಲಿ ಕೊಲೆ, ದರೋಡೆಯಂತಹ ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆತನನ್ನು ೨೦೧೬ರಲ್ಲಿ ಅಂದಿನ ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಬಂಧಿಸಿ ಹಾಸನ ರಸ್ತೆಯಲ್ಲಿ ಮೆರವಣಿಗೆ ಮಾಡಿ ಈತ ಇನ್ನು ರೌಡಿ ಅಲ್ಲ, ಈತನ ಹೆಸರು ಚೈಲ್ಡ್ ರವಿಯಲ್ಲ ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು.
ಡಾನ್ ಪಟ್ಟಕ್ಕೆ ಕೊಲೆ: ಒಮ್ಮೆ ಇವನನ್ನು ಗಡಿಪಾರು ಕೂಡ ಮಾಡಿಸಿದ್ದರು. ಇಷ್ಟೆಲ್ಲದರ ನಡುವೆ ಕಳೆದ ನಾಲ್ಕು ವರ್ಷಗಳಿಂದ ರವಿ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ. ಎಲ್ಲಿಯೂ ಗಲಾಟೆ ಮಾಡಿಕೊಂಡ ಬಗ್ಗೆ ಠಾಣೆಗೆ ದೂರು ಕೂಡ ಬಂದಿರಲಿಲ್ಲ. ಈ ನಡುವೆ ಡಾನ್ ಪಟ್ಟಕ್ಕಾಗಿ ಈ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ನೀರು ತರಲೆಂದು ನೀರಿನ ಘಟಕಕ್ಕೆ ಹೋಗಿ ವಾಪಸ್ ಬರುವಾಗ ಹಂತಕರು ದಾಳಿ ಮಾಡಿದ್ದರು. ಮಾರಕಾಸ್ತ್ರಗಳಿಂದ ನಾಲ್ವರು ದುಷ್ಕರ್ಮಿಗಳು ರಸ್ತೆಯಲ್ಲಿಯೇ ಕೊಚ್ಚಿ ಕೊಂದು ಪರಾರಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!