ಉದಯವಾಹಿನಿ, ತುಮಕೂರು: ಕಲ್ಪತರುನಾಡು ತುಮಕೂರು ನಗರದಲ್ಲಿ ಪ್ರತಿನಿತ್ಯ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಗಳು, ಅಂಡರ್‌ಪಾಸ್‌ಗಳು ಹಾಗ ತಗ್ಗುಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ನಿನ್ನೆ ಸಂಜೆ ಬಿದ್ದ ಮಳೆಗೆ ಅಂತರಸನಹಳ್ಳಿ-ಯಲ್ಲಾಪುರದ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಸಂಗ್ರಹವಾಗಿ ನದಿಯಂತೆ ಹರಿದಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಾರು, ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲಾಗದೆ ಪರದಾಡುವಂತಾಗಿತ್ತು. ಸಣ್ಣ ಮಳೆ ಬಂದರೂ ಈ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿದ್ದು ಜನರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.
ನಗರದ ಅಮಾನಿಕೆರೆ, ಕೋತಿತೋಪು, ಮಹಾತ್ಮಗಾಂಧಿ ರಸ್ತೆ, ಅಶೋಕ ರಸ್ತೆ, ಗುಬ್ಬಿ ಗೇಟ್ ಶೆಟ್ಟಿಹಳ್ಳಿ-ಕುಣಿಗಲ್ ರಸ್ತೆ, ರಿಂಗ್‌ರಸ್ತೆಯ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಕೆರೆಯಂತೆ ನಿಲ್ಲುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ರಸ್ತೆಯಲ್ಲಿ ಬಿದ್ದು ಅಪಾಯಕ್ಕೆ ಸಿಲುಕುತ್ತಿರುವುದು ಕಂಡು ಬರುತ್ತಿದೆ.
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದಲೇ ಈ ಅನಾಹುತಗಳಿಗೆ ಕಾರಣವಾಗಿದೆ. ರಾಜಗಾಲುವೆ ಮತ್ತು ಚರಂಡಿಗಳಲ್ಲಿರುವ ಹೂಳು ತೆಗೆಯದ ಮಹಾನಗರಪಾಲಿಕೆ ಮೀನಾಮೇಷ ಎಣಿಸುತ್ತಿದೆ. ರಸ್ತೆಗಳು, ಮತ್ತು ಚರಂಡಿಗಳಲ್ಲಿ ಗುಂಡಿಗಳಿದ್ದು ನೀರು ನಿಂತಾಗ ಕಾಣದೆ ಬೀಳುವ ಅಪಾಯ ನಗರದ ಎಲ್ಲೆಡೆಯೂ ಇದೆ.
ಕೋತಿ ತೋಪಿನ ಸರ್ವೋದಯ ಕಾಲೇಜು ಮುಂಭಾಗದ ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿದ್ದರಿಂದ ಶಾಲಾ ಮಕ್ಕಳು ತೆರಳಲು ತುಂಬಾ ತೊಂದರೆ ಅನುಭವಿಸುವಂತಾಯಿತು. ಸೈಕಲ್‌ನಲ್ಲಿ ತೆರಳುತ್ತಿದ್ದ ಮಕ್ಕಳು ಬ್ಯಾಗ್ ಹೊತ್ತುಕೊಂಡು ಮತ್ತು ಸೈಕಲ್ ಎರಡನ್ನೂ ತಳ್ಳಿಕೊಂಡು ಹೋಗಲು ಕಷ್ಟ ಅನುಭವಿಸುತ್ತಿದ್ದ ದೇವರೇ ಬಲ್ಲ. ದೊಡ್ಡ ವಾಹನಗಳು ಚಲಿಸಿದಾಗ ಮಕ್ಕಳ ಬಟ್ಟೆಗಳಿಗೆಲ್ಲಾ ನೀರು ಸಿಡಿದು ನೆನೆದು ಮುದ್ದೆಯಾದವು, ಇದರಿಂದ ಮಕ್ಕಳು ಮತ್ತಷ್ಟು ಪೇಚಿಗೆ ಸಿಲುಕಿಕೊಂಡರು.
