
ಉದಯವಾಹಿನಿ, ದಾವಣಗೆರೆ: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಬಿರುಸಿನ ಮಳೆಯಿಂದಾಗಿ ಹಲವು ಬಡಾವಣೆಗಳ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದೆ. ಜೋರು ಮಳೆಯಿಂದಾಗಿ ಕೆಲ ಕಾಲ ವಾಹನ ಸವಾರರು ಪರದಾಡಿದರು.
ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದವು. ರಸ್ತೆ ಪಕ್ಕದ ಮಳಿಗೆಗಳು, ಅಂಗಡಿಗಳು, ಹೋಟೆಲ್‌ಗಳು ಹಾಗೂ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು, ವ್ಯಾಪಾರಸ್ಥರು ಸಮಸ್ಯೆ ಅನುಭವಿಸಿದರು.ನಗರದ ಪಿ.ಬಿ. ರಸ್ತೆ, ವಿನೋಬನಗರ, ಈರುಳ್ಳಿ ಮಾರುಕಟ್ಟೆ, ಕೆಎಸ್‌ಆರ್‌ಟಿಸಿ ಹಳೇ ಬಸ್ ನಿಲ್ದಾಣ ಹಾಗೂ ಹಳೇ ದಾವಣಗೆರೆಯ ವಿವಿಧ ಭಾಗಗಳಲ್ಲಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಪರದಾಟ ನಡೆಸಿದ್ದು ಕಂಡುಬಂತು.ಪಿಸಾಳೆ ಕಾಂಪೌಂಡ್ ಬಳಿ ಜೋರು ಮಳೆಗೆ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ರಾಜಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಬಳಿಕ ಕ್ರೇನ್ ಮೂಲಕ ಅದನ್ನು ಹೊರತೆಗೆಯಲಾಯಿತು. ರಸ್ತೆಗಳು ಕೆಸರುಮಯ: ಮಳೆಯಿಂದಾಗಿ ನಗರದ ವಿವಿಧ ಕಾಲೊನಿಗಳಲ್ಲಿನ ಮಣ್ಣಿನ ರಸ್ತೆಗಳು ಕೆಸರುಮಯವಾಗಿ ಬದಲಾಗಿವೆ. ವಿವಿಧ ಕಾಮಗಾರಿಗಳಿಗೆಂದು ರಸ್ತೆ ಅಗೆದಿದ್ದು, ಇದೀಗ ಮಳೆಯಿಂದಾಗಿ ಸಂಚರಿಸುವುದೇ ದುಸ್ತರವಾಗಿದೆ. ‘ಕೆ.ಬಿ.ಬಡಾವಣೆಯ 1ನೇ ಮುಖ್ಯ ರಸ್ತೆಯಲ್ಲಿನ 9ನೇ ಅಡ್ಡರಸ್ತೆಯಲ್ಲಿ ಈಚೆಗೆ ಒಳಚರಂಡಿ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ನೆಪದಲ್ಲಿ ಮುಂಚೆ ಇದ್ದ ಡಾಂಬರು ರಸ್ತೆಯನ್ನು ಹಾಳು ಮಾಡಲಾಗಿದೆ. ಇದೀಗ ರಸ್ತೆಯು ಸಂಪೂರ್ಣ ಮಣ್ಣಿನಿಂದ ಕೂಡಿದ್ದು, ಮಳೆಯಿಂದಾಗಿ ಕೆಸರುಮಯ ಹಾದಿಯಲ್ಲಿ ಓಡಾಡುವುದೇ ಸವಾಲಾಗಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದರು.’ಹಲವು ಬಡಾವಣೆಗಳಲ್ಲಿ ಇಂಥದ್ದೇ ಸಮಸ್ಯೆ ಎದುರಾಗಿದೆ. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವಿರಲಿ, ಓಡಾಡಲೂ ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಪಾಲಿಕೆ ಸದಸ್ಯರನ್ನು ಕೇಳಿದರೆ, ಅನುದಾನವಿಲ್ಲ ಎನ್ನುತ್ತಿದ್ದಾರೆ’ ಎಂದು ನಾಗರಿಕರು ಸಂಕಷ್ಟ ತೋಡಿಕೊಂಡರು.
