ಉದಯವಾಹಿನಿ, ಬೆಂಗಳೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ನಡುವೆಯೇ ರಾಜ್ಯಸರ್ಕಾರ ಅವುಗಳ ಸಾಧಕ ಬಾಧಕ ಪರಿಶೀಲನೆಗಾಗಿ ಹಿರಿಯರ ಹಾಗೂ ಅನುಭವಿಗಳ ಸಮಿತಿ ರಚನೆ ಮಾಡಿ ಅನರ್ಹ ಫಲಾನುಭವಿಗಳನ್ನು ಪರಿಷ್ಕರಣೆ ಮಾಡುವ ಚಿಂತನೆಯಲ್ಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪ್ರಮುಖ ಸಚಿವರ ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಔಪಚಾರಿಕ ವಿಮರ್ಶೆಯಾಗಿದ್ದು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿದಿಲ್ಲ ಎಂಬ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
52ಸಾವಿರ ಕೋಟಿ ರೂ.ಗಳಷ್ಟು ಹಣ ವೆಚ್ಚ ಮಾಡಿ ಜನರ ಆರ್ಥಿಕ ಸಬಲೀಕರಣಕ್ಕಾಗಿ ರೂಪಿಸಲಾದ ಯೋಜನೆಗಳು ರಾಜಕೀಯವಾಗಿ ಕಾಂಗ್ರೆಸ್‍ಗೆ ಲಾಭ ತಂದುಕೊಡಬಹುದು ಎಂಬ ಅಂದಾಜಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿಯ ಮೈತ್ರಿಯಿಂದಾಗಿ ಜಾತಿ ಸಮೀಕರಣವೇ ಮೇಲುಗೈ ಸಾಧಿಸಿದೆ. ಯೋಜನೆಯ ಲಾಭ ಪಡೆದ ಫಲಾನುಭವಿಗಳು ಕಾಂಗ್ರೆಸ್ ಜೊತೆ ನಿಲ್ಲಲಿದ್ದಾರೆ ಎಂಬ ಅಂದಾಜು ತಲೆಕೆಳಗಾಗಿದೆ.
ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡಿ ಅರ್ಹ ಫಲಾನುಭವಿಗಳಿಗೆ ಮಾತ್ರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ. ಲೋಕಸಭಾ ಚುನಾವಣೆಗೂ ಮೊದಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ವಿಮರ್ಶೆಗಳಾಗಿದ್ದವು. ಮಹಿಳೆಯರಿಗೆ ಸಂಪೂರ್ಣ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಜಾರಿಗೊಳಿಸುವ ಬದಲಾಗಿ ಬಡವರಿಗೆ ಆರ್ಥಿಕವಾಗಿ ಅಗತ್ಯವಿರುವವರಿಗೆ ಸೌಲಭ್ಯ ನೀಡಬೇಕು.

 

Leave a Reply

Your email address will not be published. Required fields are marked *

error: Content is protected !!