ಉದಯವಾಹಿನಿ, ಮಧುಗಿರಿ : ತಾಲ್ಲೂಕಿನ ಮಿಡಿಗೇಶಿ ಹೋಬಳಿ ಚಿನ್ನೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಲಕ್ಷ್ಮಿದೇವಿ ಹಾಗೂ ಕೆಂಪಮ್ಮ ದೇವಿಯ ಐದು ದಿನಗಳ ಕಾಲ ಜಾತ್ರ ಮಹೋತ್ಸವ ಪ್ರಾರಂಭವಾಗಿದ್ದು, ಕಲುಷಿತ ನೀರು ಕುಡಿದು ಕಳೆದ ಎರಡು ದಿನಗಳಿಂದ ೬೦ ಕ್ಕೂ ಹೆಚ್ಚು ಜನ ಗ್ರಾಮಸ್ಥರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ಸಂಭ್ರಮ ಏರ್ಪಟ್ಟಿತ್ತು ಆದರೆ ಗ್ರಾಮದಲ್ಲಿನ ಕೊಳವೆ ಬಾವಿಯ ನೀರು ಸೇವಿಸಿ ಗ್ರಾಮದ ಜನರಿಗೆ ವಾಂತಿ ಭೇದಿ ಸುಸ್ತಿನಿಂದ ಬಳಲುತ್ತಿದ್ದು ಕೆಲವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದರೆ ಮತ್ತೆ ಕೆಲವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆ ಯಿಂದ ನಿರ್ಗಮಿಸುತ್ತಿದ್ದಾರೆ.
ಗ್ರಾಮದಲ್ಲಿ ಕೆಲವರು ಶುದ್ಧ ನೀರಿನ ಘಟಕದ ಹಾಗೂ ಟ್ಯಾಂಕ್ ನೀರನ್ನು ಕುಡಿಯಲು ಬಳಸುತ್ತಿದ್ದರೆಂದು ತಿಳಿದು ಬಂದಿದೆ. ಚಿನ್ನೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದಿದ್ದು ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೊಳವೆ ಬಾವಿ ಹಾಗೂ ಶುದ್ಧ ನೀರಿನ ಘಟಕದ ನೀರನ್ನು ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದ್ದು, ಸ್ಥಳದಲ್ಲಿ ಡಿಹೆಚ್‌ಓ, ಉಪವಿಭಾಗಾಧಿಕಾರಿ, ಟಿಹೆಚ್‌ಓ ಹಾಗೂ ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
